ಮೈಸೂರು: ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ದುರ್ದೈವದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯುಕ್ತಿಕ ಕಾರಣಕ್ಕೆ ಕೊಲೆಯಾಗಿದೆ. ಕೊಲೆ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆರೋಪಿಯನ್ನು ನಾವು ಬಂಧಿಸಿದ್ದೇವೆ. ಬಿಜೆಪಿಯವರು ಕೊಲೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ, ಮಾಡಲಿ. ಆದರೆ ಎಲ್ಲಾ ಕಾಲದಲ್ಲೂ ಕೊಲೆಗಳಾಗಿವೆ. ಹಾಗೆಂದ ಮಾತ್ರಕ್ಕೆ ನಾವು ಕಾನೂನು ಸುವ್ಯವಸ್ಥೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರ್ಥಲ್ಲ. ನಾವು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಗಂಭೀರವಾಗಿದ್ದೇವೆ ಎಂದರು.
ಮೋದಿ ಅಲೆಯಿಲ್ಲ: ದೇಶದಲ್ಲಿ ಮೋದಿ ಅಲೆಯಿಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಅವಲಂಬಿಸಿದ್ದಾರೆ. ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಐ.ಎನ್.ಡಿ.ಐ ಪರ ಅಲೆಯಿದೆ. ಎಲ್ಲಾ ಕಡೆ ಉತ್ತಮವಾದ ವಾತಾವರಣವಿದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಖಾಲಿ ಚೊಂಬಿನ ಜಾಹೀರಾತು ವಿಚಾರಕ್ಕೆ ಬಿಜೆಪಿ ಜೆ.ಡಿ.ಎಸ್ ವ್ಯಂಗ್ಯ ವಿಚಾರಕ್ಕೆ ಮಾತನಾಡಿದ ಅವರು, ಸರ್ಕಾರ ಖಜಾನೆ ಖಾಲಿಯಾಗಿಲ್ಲ. ಗ್ಯಾರಂಟಿಗೂ ಹಣ ಕೊಟ್ಟಿದ್ದೇವೆ, ಅಭಿವೃದ್ಧಿಗೂ ಹಣ ಮೀಸಲಿರಿಸಿ ಅಭಿವೃದ್ಧಿ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಕೈಗೆ ಚೊಂಬು ಕೊಟ್ಟರು ಅಂತಾರಲ್ಲ ಆ ರೀತಿ ಬಿಜೆಪಿಯವರು 15 ಲಕ್ಷ ಕೊಡುತ್ತೇವೆ ಅಂದರು, ಉದ್ಯೋಗ ಕೊಡುತ್ತೇವೆ ಎಂದರು, ರೈತರ ಆದಾಯ ಡಬಲ್ ಮಾಡುತ್ತೇವೆಂದರು, ಆದರೆ ಮಾಡಿದ್ದರಾ? ಈ ವಿಚಾರ ಇಟ್ಟುಕೊಂಡೆ ಖಾಲಿ ಚೊಂಬಿನ ಖಾಲಿ ಜಾಹಿರಾತು ಕೊಟ್ಟಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ, ಸಿದ್ದರಾಮಯ್ಯ ಅವರೇ ನಾಶದ ಬಗ್ಗೆ ಹೇಳ್ತಾರೆ ಎಂಬ ಎಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಜೆಡಿಎಸ್ ನವರಿಗೆ ಕಾಂಗ್ರೆಸ್ ಕಂಡರೆ ಭಯ. ಆ ಕಾರಣಕ್ಕೆ ಸ್ವತಂತ್ರವಾಗಿ ಚುನಾವಣೆ ಎದುರಿಸಿಲ್ಲ. ಅವರಿಗೆ ಭಯವಿರುವ ಕಾರಣಕ್ಕೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ನಮಗೆ ಅವರನ್ನು ಕಂಡರೆ ಯಾವುದೇ ಭಯವಿಲ್ಲ. ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.