ಶಿವಮೊಗ್ಗ: ಜಗತ್ತಿನ ಜನಮನ್ನಣೆ ಪಡೆದ ಮೈಸೂರು ಸಿಲ್ಕ್ ರೇಷ್ಮೆ ಉತ್ಪನ್ನಗಳು ನಾಡಿನ ಶ್ರೀಮಂತಿಕೆಯ ಪ್ರತೀಕವಾಗಿವೆ ಎಂದು ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಹೇಳಿದರು.
ಗುರುವಾರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಉತ್ಪನ್ನಗಳಿಂದಲೇ ಪ್ರಸಿದ್ಧಿ ಪಡೆದಿರುವ ಮೈಸೂರು ಸಿಲ್ಕ್ ಸರ್ಕಾರದ ಅಧೀನ ಮತ್ತು ಅಧಿಕೃತ ಸಂಸ್ಥೆ ಎನಿಸಿದೆ. ಬೇಡಿಕೆಗೆ ತಕ್ಕಂತೆ, ಆದುನಿಕ ಕಾಲಮಾನಕ್ಕೆ ಅನುಗುಣವಾಗಿ ಸಾಂಪ್ರದಾಯಿಕ ಹಾಗೂ ಆಧುನಿಕತೆಯಿಂದ ಕೂಡಿರುವ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವಲ್ಲಿ ಸಂಸ್ಥೆ ಸಮರ್ಥವಾಗಿದೆ. ಮೈಸೂರು ರೇಷ್ಮೆ ಉತ್ಪನ್ನಗಳು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಾಗಬೇಕೆಂದರು.
ಉಪಸ್ಥಿತರಿದ್ದ ಸಂಸ್ಥೆಯ ನಿರ್ದೇಶಕ ಜಿ.ಪಿ. ವಿಜಯ್‌ಕುಮಾರ್ ಮಾತನಾಡಿ, ಮೈಸೂರು ಸಿಲ್ಕ್ ಉತ್ಪನ್ನಗಳು ಐತಿಹಾಸಿಕ, ಪಾರಂಪರಿಕ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರತಿಷ್ಠಿತ ಉತ್ಪನ್ನವಾಗಿದ್ದು, ಇದರ ಬಳಕೆಯಿಂದಾಗಿ ವ್ಯಕ್ತಿಯ ಘನತೆ ಮತ್ತು ಗೌರವ ಹೆಚ್ಚಲಿದೆ ಎಂದರು.
ಕೆ.ಎಸ್.ಐ.ಸಿ. ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಭಾನುಪ್ರಕಾಶ್ ಅವರು ಮಾತನಾಡಿ, ಸಂಸ್ಥೆಯ ವತಿಯಿಂದ ತಜ್ಞ ನೇಕಾರರಿಂದ ಅತ್ಯುತ್ತಮ ಗುಣಮಟ್ಟದ ಒಂದು ಲಕ್ಷಕ್ಕಿಂತ ಹೆಚ್ಚಿನ ಸೀರೆಗಳನ್ನು ಉತ್ಪಾದಿಸುತ್ತಿದೆ. ಇದರಿಂದಾಗಿ ವಾರ್ಷಿಕವಾಗಿ 500 ಕೋಟಿ ರೂ. ಆರ್ಥಿಕ ವಹಿವಾಟನ್ನು ಹೊಂದಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಮೈಸೂರು ಸಿಲ್ಕ್ ಸೀರೆಗಳು ಇತರೆ ರೇಷ್ಮೆ ವಸ್ತ್ರಗಳಿಗಿಂತ ಭಿನ್ನವಾಗಿವೆ. ಈ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ದೊರೆಯುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ವಿಶೇಷವಾಗಿ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬ- ಹರಿದಿನಗಳ ಸಂದರ್ಭದಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆಗಳಾಗಿವೆ ಎಂದರು..