Advertisement
ಜಲಮೂಲ, ಜಲಚರ ಸೇರಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪೇಪರ್ ಮೌಲ್ಡ್ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿಗಳು ಸದ್ದಿಲ್ಲದೇ ತಯಾರಾಗುತ್ತಿದ್ದು ಮಾರುಕಟ್ಟೆ ಪ್ರವೇಶಕ್ಕೆ ಅಣಿಯಾಗುತ್ತಿವೆ. ಈ ಎಲ್ಲಾ ಚಟುವಟಿಕೆ ನಿಯಂತ್ರಿಸಲು ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಪಂ ಪಿಒಪಿ ಗಣೇಶ ಮೂರ್ತಿ ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕಿದೆ.
Related Articles
Advertisement
ಪರಿಸರ ಮೂರ್ತಿಗೆ ಡಿಮ್ಯಾಂಡ್:
ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ-ಗೌರಿ ಮೂರ್ತಿಗಳ ಖರೀದಿಗೆ ಜನ ಹೆಚ್ಚು ಉತ್ಸುಕರಾಗಿದ್ದು, ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡುತ್ತಿದ್ದಾರೆ. ಜತೆಗೆ ತಯಾರಕರು ಅರ್ಧ ಅಡಿಯಿಂದ ಹಿಡಿದು 6 ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿ ಸಿದ್ಧಪಡಿಸಿದ್ದಾರೆ. ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ.
ಪಿಒಪಿ ಮೂರ್ತಿಗಳ ನಿಷೇಧ ಏಕೆ?:
ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ 8ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಈ ಮೂರ್ತಿಗಳನ್ನು ರಸಾಯನಿಕ ವಸ್ತುಗಳಿಂದ ತಯಾರಿಸುವುದಲ್ಲದೇ ಇವುಗಳನ್ನು ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ಕರಗುವುದಿಲ್ಲ. ಜತೆಗೆ ನೀರು ಹಾಳಾಗುವುದಲ್ಲದೇ ಪರಿಸರವೂ ನಾಶವಾಗುತ್ತದೆ.
ಏನಿದು ಪೇಪರ್ ಮೋಲ್ಡ್ ಗಣಪ?:
ಇತ್ತೀಚಿನ ದಿನಗಳಲ್ಲಿ ಪಿಒಪಿ ಬದಲಿಗೆ ಕಡಿಮೆ ತೂಕದ ಎತ್ತರ ಮತ್ತು ಆಕರ್ಷಕ ಪೇಪರ್ ಮೋಲ್ಡ್ ಗಣಪತಿ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವು ಸಹ ಪರಿಸರಕ್ಕೆ ಮಾರಕವಾಗಿವೆ. ಪೇಪರ್ ಅಚ್ಚಿನ ಮೂಲಕ ತಯಾರಿಸಲ್ಪಡುವ ಇವು ಬಹು ದಿನಗಳ ಕಾಲ ಇಡಲು ಕೆಮಿಕಲ್ ಬಳಸಲಾಗುತ್ತದೆ. ಇದನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ಕರಗುವುದಿಲ್ಲ. ಜತೆಗೆ ಮೂರ್ತಿಯಲ್ಲಿರುವ ವಿಷ ಪದಾರ್ಥ ನೀರಿಗೆ ಸೇರುತ್ತದೆ. ಇದರಿಂದ ನೀರು ಮಲಿನವಾಗಿ ಜಲಚರಗಳಿಗೆ ಹಾನಿಯಾಗುವ ಸಂಭವವಿದೆ.
ಪಿಒಪಿ, ಪೇಪರ್ ಮೋಲ್ಡ್ ಗಣೇಶ ಮೂರ್ತಿ ನಿಷೇಧಿಸಲಾಗಿದೆ. ಇವುಗಳನ್ನು ಖರೀದಿಸದಂತೆ , ಪರಿಸರ ಹಾನಿ ಬಗ್ಗೆ ಮಂಡಳಿಯಿಂದ ಶಾಲಾ-ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.-ಹರಿಶಂಕರ್, ಪರಿಸರ ಅಧಿಕಾರಿ, ಪ್ರಾದೇಶಿಕ ಕಚೇರಿ 1, ಮಾಲಿನ್ಯ ನಿಯಂತ್ರಣ ಮಂಡಳಿ.
-ಸತೀಶ್ ದೇಪುರ