ಮಂಡ್ಯ: ಪೋಷಕರ ತೀವ್ರ ವಿರೋಧದ ನಡುವೆ ಸ್ವಜಾತಿಯ ಯುವಜೋಡಿಯೊಂದು ನಗರದಿಂದ ಕಣ್ಮರೆಯಾಗಿ ಮೈಸೂರಿನಲ್ಲಿ ವಿವಾಹವಾಗಿರುವ ಪ್ರಕರಣ ವರದಿಯಾಗಿದೆ. ಯುವ ಜೋಡಿ ರಕ್ಷಣೆ ಕೋರಿ ಪ್ರತ್ಯೇಕ ಮನವಿಗಳನ್ನು ಮೈಸೂರಿನ ಪೊಲೀಸರಿಗೆ ಸಲ್ಲಿಸಿದ್ದರೂ ಯುವ ಜೋಡಿಯ ಪೋಷಕರು ನಗರ ಪೊಲೀಸರ ಮೇಲೆ ತೀವ್ರ ಒತ್ತಡ ಹೇರುತ್ತಿರುವುದಾಗಿ ತಿಳಿದು ಬಂದಿದೆ.
ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಜೋಡಿಯೇ ಬಿಡುಗಡೆಗೊಳಿಸಿದ್ದು, ಅದರ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಮುನ್ನವೇ ನಗರ ಪೂರ್ವ ಠಾಣೆ ಪೊಲೀಸರು ಅವನ್ನು ‘ನಕಲು ಮತ್ತು ಫೋಟೋಶಾಪ್’ ಎಂದು ಮಾಧ್ಯಮಗಳಿಗೆ ತಿಳಿಸಿರುವುದು ಶಂಕೆಗೆ ಎಡೆಮಾಡಿ ಕೊಟ್ಟಿದೆ.
ಘಟನೆ ವಿವರ: ನಗರದ ಹಾಲಹಳ್ಳಿ ಬಡಾವಣೆಯ ಕೃಷ್ಣೇಗೌಡರ ಮಗ ನಿರಂಜನ್‌ಗೌಡ(27), ಅದೇ ಬಡಾವಣೆಯ ನಾಗರಾಜು ಪುತ್ರಿ ಚಂದ್ರಶ್ರೀ (25) 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆಂದು ಪೊಲೀಸರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಯುವಕನ ಮನೆಯವರು ಹುಡುಗಿ ಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದರೆನ್ನಲಾಗಿದೆ. ಇದಕ್ಕೆ ಯುವತಿಯ ಮನೆಯವರು ಒಪ್ಪಿಗೆ ಸೂಚಿಸಿರಲಿಲ್ಲ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಮೂರು ದಿನಗಳ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದರು. ಯುವತಿ ನಾಪತ್ತೆ ಬಳಿಕ ಆಕೆಯ ತಂದೆ ನಾಗರಾಜು ಮಗಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಮಧ್ಯೆ ಯುವ ಜೋಡಿ ಮೈಸೂರಿನ ಲಷ್ಕರ್ ಮೊಹಲ್ಲಾ ಮಹಿಳಾ ಠಾಣೆಯಲ್ಲಿ ನಮಗೆ ರಕ್ಷಣೆ ನೀಡುವಂತೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.
ಆದರೆ ಯುವತಿಯ ಪೋಷಕರು ಒತ್ತಡ ಹೇರುತ್ತಿರುವ ಕಾರಣ ಪೊಲೀಸರು ಮತ್ತೆ ನಿರಂಜನ್ ಪೋಷಕರಿಗೆ ಎಚ್ಚರಿಕೆ ನೀಡಿ ನಾಪತ್ತೆಯಾಗಿರುವ ಯುವಜೋಡಿಯ ಮಾಹಿತಿ ನೀಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.