ಮೈಸೂರು: ಮೈಸೂರು (ಬೆಳಗೊಳ) – ಕುಶಾಲನಗರ ನಡುವೆ ರೈಲ್ವೆ ಹಳಿ ಜೋಡಣೆಯ 1854.62 ಕೋಟಿ ರೂ. ವೆಚ್ಚದ ನೂತನ ರೈಲು ಮಾರ್ಗದ ಕಾಮಗಾರಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.
ರೈಲ್ವೆ ಮಂಡಳಿಯ ಕಾಮಗಾರಿ ವಿಭಾಗದ ನಿರ್ದೇಶಕ ಧನಂಜಯ ಸಿಂಗ್ ಈ ಸಂಬಂಧ ಆದೇಶ ಹೊರಡಿಸಿದ್ದು, 87 ಕಿ.ಮೀ ಉದ್ದದ ಮೈಸೂರು (ಬೆಳಗೊಳ)- ಕುಶಾಲನಗರ ನೂತನ ರೈಲು ಮಾರ್ಗದ ಹಳಿ ಜೋಡಣೆಯಲ್ಲಿ ಸಿವಿಲ್ ಕಾಮಗಾರಿಗೆ 1723.78 ಕೋಟಿ ಸೇರಿದಂತೆ 1854.62 ಕೋಟಿಗೆ ಅನುಮೋದನೆ ನೀಡಿ, ಪಿಂಕ್ ಬುಕ್‌ನಲ್ಲಿ ನಮೂದಿಸುವಂತೆ ರೈಲ್ವೆ ಇಲಾಖೆಗೆ ತಿಳಿಸಿದೆ.
ಇದರೊಂದಿಗೆ ದಶಕಗಳಿಂದ ಈ ಭಾಗದ ಜನರು ಕನಸು ಕಾಣುತ್ತಿದ್ದ ರೈಲು ಮಾರ್ಗ ಯೋಜನೆ ಅನುಷ್ಠಾನವಾಗುವ ದಿನಗಳು ಹತ್ತಿರವಾಗಿದ್ದು, ರಾಜ್ಯಸರ್ಕಾರ ಯೋಜನೆಗೆ ಭೂಸ್ವಾಧೀನ ಮಾಡಿಕೊಡಬೇಕಿದೆ.
ಈ ಹಿಂದೆಯೇ ಸರ್ವೇ ಆಗಿರುವಂತೆ ಬೆಳಗೊಳ (ಮೈಸೂರು), ಇಲವಾಲ,ಬಿಳಿಕೆರೆ, ಉದ್ದೂರು, ಹುಣಸೂರು, ಸತ್ತೇಗಾಲ, ಪಿರಿಯಾಪಟ್ಟಣ, ದೊಡ್ಡ ಹೊನ್ನೂರು ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮ ಕೊಪ್ಪದಲ್ಲಿ 86.50 ಕಿ.ಮೀಗೆ ಕೊನೆಯ ನಿಲ್ದಾಣ ನಿರ್ಮಾಣವಾಗಲಿದೆ.
ಕೊಪ್ಪದ ಗಡಿಯಲ್ಲಿ ಹರಿಯುವ ಕಾವೇರಿ ನದಿಯ ಸೇತುವೆಯ ಆಚೆಗೆ ಕುಶಾಲನಗರ ಇರುವುದರಿಂದ ಕೊಡಗು ಜಿಲ್ಲೆಗೂ ರೈಲು ಸೇವೆ ದೊರೆತಂತಾಗಲಿದೆ. ಈ ಭಾಗದ ಜನರ ಬಹು ವರ್ಷದಗಳ ಕನಸಾಗಿದ್ದ ರೈಲ್ವೇ ಯೋಜನೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ.