Advertisement

ಸ್ವಚ್ಛ ಸರ್ವೇಕ್ಷಣೆಗೆ ಕೈಜೋಡಿಸಿದರೆ ಮೈಸೂರು ನಂ.1

09:11 PM Jan 04, 2020 | Team Udayavani |

ಮೈಸೂರು: ಸ್ವಚ್ಛತೆ ವಿಚಾರವಾಗಿ ನಗರಪಾಲಿಕೆ ಬಗ್ಗೆ ಮೈಸೂರಿನ ಜನತೆ ಎಷ್ಟೇ ಟೀಕೆ, ವಿಮರ್ಶೆ ಮಾಡಲಿ, ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತೇವೆ. ಆದರೆ, ಸ್ವಚ್ಛ ಸರ್ವೇಕ್ಷಣೆ ನಡೆಯುವ ಒಂದು ತಿಂಗಳು ಪಾಲಿಕೆಯೊಂದಿಗೆ ಕೈ ಜೋಡಿಸಿ ಮೈಸೂರನ್ನು ಸ್ವಚ್ಛತೆಯಲ್ಲಿ ನಂಬರ್‌ ಒನ್‌ ಸ್ಥಾನ ಪಡೆಯಲು ಸಹಕರಿಸಬೇಕು ಎಂದು ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ ಮಾಡಿದರು.

Advertisement

ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣೆ ಕುರಿತ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಸ್ವಚ್ಛತೆಯಲ್ಲಿ ಮೈಸೂರು ನಗರ ಮುಂದೆ ಇದೆ. ಸ್ವಚ್ಛತೆಯಲ್ಲಿ ನಾವು ಸಾಕಷ್ಟು ಮುಂದಿದ್ದರೂ ನಂಬರ್‌ ಒನ್‌ ಸ್ಥಾನ ಪಡೆಯುವಲ್ಲಿ ತಾಂತ್ರಿಕವಾಗಿ ಹಿಂದುಳಿದಿದ್ದೇವೆ. ಆ ತಪ್ಪನ್ನು ಸರಿಪಡಿಸಿಕೊಂಡು ಈ ಬಾರಿ ಮತ್ತೆ ನಂಬರ್‌ ಒನ್‌ ಸ್ಥಾನ ಪಡೆಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಒತ್ತುವರಿ ತೆರವು: ನಗರದ ಹೃದಯ ಭಾಗದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ಹಾಗೂ ಫ‌ುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ಕಡಿವಾಣ ಹಾಕಿದ್ದೇವೆ. ಉಳಿದೆಡೆಯೂ ಫ‌ುಟ್‌ಪಾತ್‌ ವ್ಯಾಪಾರಕ್ಕೆ ಹಂತ ಹಂತವಾಗಿ ಕಡಿವಾಣ ಹಾಕಲಾಗುವುದು. ಫ‌ುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರು ಬಹುತೇಕ ಬಡ ವರ್ಗದವರಾಗಿರುವುದರಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಾಗ ಗುರುತಿಸಲಾಗಿದೆ. ಇತ್ತೀಚೆಗೆ ಕೆಲವು ಇ-ಶೌಚಗೃಹಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಅವುಗಳನ್ನು ಇದೀಗ ಸರಿಪಡಿಸಲಾಗಿದ್ದು, ಎಲ್ಲ ಶೌಚಗೃಹಗಳು ಸುಸ್ಥಿತಿಯಲ್ಲಿರಿಸಲಾಗಿದೆ ಎಂದರು.

ದಂಡ: ನಗರಪಾಲಿಕೆಯ ವಲಯ ಕಚೇರಿ 1, 2 ಮತ್ತು 3 ರಲ್ಲಿ ಮನೆ ಮನೆಗಳಿಂದ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಪಡೆಯಲಾಗುತ್ತಿದೆ. ಕಸವನ್ನು ಬೇರ್ಪಡಿಸಿ ನೀಡದವರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೂ ಸಹಕರಿಸದಿದ್ದರೆ ಅಂಥವರಿಗೆ ದಂಡ ವಿಧಿಸಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಸ್ವಚ್ಛತೆಗೆ ಸಹಕರಿಸದವರಿಗೆ 6 ಲಕ್ಷ ರೂ. ದಂಡ ವಿಧಿಸಿರುವುದಾಗಿ ಹೇಳಿದರು.

ಪುರಪಿತೃಗಳೊಂದಿಗೆ ಮತ್ತೆ ಸಭೆ: ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿ, ಸ್ವಚ್ಛತೆ ವಿಚಾರದ ಬಗ್ಗೆ ಚರ್ಚಿಸಲು ಇತ್ತೀಚೆಗೆ ಕರೆಯಲಾಗಿದ್ದ ಪಾಲಿಕೆ ಸಭೆಯಲ್ಲಿ ಅನುದಾನ ವಿಚಾರ ಚರ್ಚೆಯಾಗಿ ಸದಸ್ಯರು ಸಭೆ ಬಹಿಷ್ಕರಿಸಿದರು. ಆದರೆ, ಸ್ವಚ್ಛ ಸರ್ವೇಕ್ಷಣೆಗೆ ಎಲ್ಲರೂ ಸಹಕಾರ ನೀಡುವ ವಿಶ್ವಾಸ ಇದೆ ಎಂದು ಹೇಳಿದರು.

Advertisement

ಕರೆ ಮಾಡಿ ಫೀಡ್‌ಬ್ಯಾಕ್‌ ನೀಡಿ: ಕಳೆದ ಬಾರಿ ನಾಗರಿಕರ ಫೀಡ್‌ಬ್ಯಾಕ್‌ ಸೇರಿದಂತೆ ಕೆಲವೊಂದು ವಿಚಾರಗಳಲ್ಲಿ ಒಟ್ಟು 5,000 ಅಂಕಗಳ ಪೈಕಿ 622 ಅಂಕಗಳನ್ನು ಕಳೆದುಕೊಂಡಿದ್ದೆವು. ಜತೆಗೆ ಘನತ್ಯಾಜ್ಯ ನಿರ್ವಹಣೆಯಲ್ಲಿ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಕೆಲವು ಅಂಕಗಳನ್ನು ಕಳೆದುಕೊಂಡೆವು. ಇದೀಗ ಘನತ್ಯಾಜ್ಯ ವಿಲೇವಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಆಗಿದೆ. ಅದೇ ರೀತಿ ಸಿ ಮತ್ತು ಡಿ ತ್ಯಾಜ್ಯ ನಿರ್ವಹಣೆ (ಕನ್‌ಸ್ಟ್ರಕ್ಷನ್‌ ಆ್ಯಂಡ್‌ ಡೆಮೋಲಿಷನ್‌ ವೇಸ್ಟ್‌) ಯಲ್ಲೂ ಅಂಕ ಕಳೆದುಕೊಂಡಿದ್ದೆವು. ನಗರದ ಹೊರ ವರ್ತುಲ ರಸ್ತೆ ಬಳಿ ಸಿ ಮತ್ತು ಡಿ ತ್ಯಾಜ್ಯ ನಿರ್ವಹಣೆಗೆ ಎಂಟು ಎಕರೆ ಜಾಗ ಗುರುತಿಸಲಾಗಿದೆ. ಹೀಗಾಗಿ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿದರು.

ನಾಗರಿಕರ ಫೀಡ್‌ಬ್ಯಾಕ್‌ಗೆ ಈ ಬಾರಿ 1,500 ಅಂಕಗಳನ್ನು ನಿಗದಿಪಡಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ನಾಗರಿಕರ ಫೀಡ್‌ಬ್ಯಾಕ್‌ ನೀಡುವಂತೆ ಮನವಿ ಮಾಡಿದ್ದೇವೆ. ಅಲ್ಲದೆ ಯಾವ ರೀತಿ ಫೀಡ್‌ಬ್ಯಾಕ್‌ ನೀಡಬೇಕೆಂಬ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನರು 1969 ಸಂಖ್ಯೆಗೆ ಕರೆ ಮಾಡಿ ಅಥವಾ ಆನ್‌ಲೈನ್‌ ಮೂಲಕ ತಮ್ಮ ಫೀಡ್‌ಬ್ಯಾಕ್‌ ನೀಡಬಹುದು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next