Advertisement
ನರಕ ಚತುರ್ದಶಿಯಂದು ಕಚೇರಿಗೆ ರಜೆ. ಕುಪ್ಪಳ್ಳಿಯ ಕವಿಶೈಲಕ್ಕೆ ಹೋಗುವುದು ಎಂಬ ನಿರ್ಧಾರ. ಆದರೆ ಹಿಂದಿನ ರಾತ್ರಿ ಒಂಬತ್ತುವರೆಗೆ ಅಂತಿಮ ಹಂತದ ತುರ್ತು ಸಭೆಯಲ್ಲಿ ಮೈಸೂರಿಗೆ ಹೋಗುವ ಪ್ರಸ್ತಾವ. 10.15ಕ್ಕೆ ಬಸ್. ನಾಲ್ಕು ಜನರ ನಮ್ಮ ತಂಡ ದಿಢೀರ್ ಹೊರಟಿದ್ದು ಮೈಸೂರಿಗೆ!
Related Articles
ಟಿಕೆಟ್ ಪಡೆದುಕೊಂಡು ಚಾಮರಾಜೇಂದ್ರ ಮೃಗಾಲಯ ಪ್ರವೇಶಿಸಿದಾಗ ಅಲ್ಲಿನ ಹಕ್ಕಿಗಳ ಕಲರವ ನಮ್ಮ ಮನಸ್ಸನ್ನು ಮುದಗೊಳಿಸಿತು. ಅಪರೂಪದ, ಅಳಿವಿನಂಚಿಲ್ಲಿರುವ ಪ್ರಾಣಿ, ಪಕ್ಷಿಗಳನ್ನು ನೋಡಿ ಪ್ರಾಣಿ, ಪಕ್ಷಿಗಳ ಮೇಲೆ ಕಾಳಜಿ ಹುಟ್ಟಿಕೊಂಡಿತು. ವೈವಿಧ್ಯಮಯ ಹಕ್ಕಿಗಳು, ಪ್ರಾಣಿಗಳು ಮತ್ತು ಸರೀಸೃಪಗಳನ್ನು ನೋಡಿದೆವು. ಅನಂತರ ಭವ್ಯವಾದ ಅರಮನೆಯತ್ತ ಧಾವಿಸಿದೆವು.
Advertisement
ಅಂಬಾವಿಲಾಸ ಅರಮನೆಐತಿಹಾಸಿಕ ಅಂಬಾವಿಲಾಸ ಅರಮನೆ ನೋಡಿ ನಾನು ಮಂತ್ರಮುಗ್ಧನಾದೆ. ಅರಮನೆಗೆ ನಾಲ್ಕು ದ್ವಾರಗಳಿವೆ. ಅರಮನೆಯ ಪ್ರವೇಶದಿಂದ ಹಿಡಿದು ಹೊರ ಬರುವವರೆಗೂ ಹೊಸ ಪ್ರಪಂಚ ಸೃಷ್ಟಿಯಾಗಿತ್ತು. ಅರಮನೆಯ ಪ್ರವೇಶ ಪಡೆದು ಮೊದಲು ದೇವಿಯ ಮೂರ್ತಿಯ ದರ್ಶನ ಪಡೆದು ಪುನೀತರಾದೆವು. ಅನಂತರ ಕುಸ್ತಿ ಅಖಾಡ ನೋಡಿದೆವು. ಅರಮನೆಯ ಕಂಬದ ಸಾಲು, ರಾಜಾಂಗಣ, ಗೋಡೆಯ ಮೇಲಿರುವ ಭಿತ್ತಿಚಿತ್ರ, ವರ್ಣಚಿತ್ರಗಳು ಇವು ಅರಮನೆಯ ಇತಿಹಾಸವನ್ನು ಸಾರಿ ಹೇಳುತ್ತಿದ್ದವು. ಝಗಮಗಿಸುವ ಒಳಾಂಗಣ, ಸ್ವರ್ಣಲೇಪಿತ ಕಂಬಗಳು, ಚಿನ್ನದ ಅಂಬಾರಿ ನಮ್ಮನ್ನು ಸೆಳೆದವು. ಅರಮನೆಯ ದೃಶ್ಯ ಸೌಂದರ್ಯ ಕಣ್ತುಂಬಿಕೊಂಡೆವು. ಅನಂತರ ಮಧ್ಯಾಹ್ನದ ಊಟ ಮುಗಿಸಿಕೊಂಡು ಮೊದಲೇ ಯೋಜಿಸಿದ್ದ, ಅಲ್ಲಿಂದ ಸುಮಾರು 90 ಕಿ.ಮೀ. ದೂರದ ಬಾವಲಿ ಅರಣ್ಯಕ್ಕೆ ಹೋಗುವ ನಮ್ಮ ಯೋಜನೆಯನ್ನು ಸಮಯದ ಅಭಾವ ಮತ್ತು ಖರ್ಚಿನ ದೃಷ್ಟಿಯಿಂದ ಕೈಬಿಡಲಾಯಿತು! ಬಳಿಕ ಅಲ್ಲಿಂದ ಕೆ.ಆರ್. ಸರ್ಕಲ್ ದಾಟಿ, ಚಿಕ್ಕ ಗಡಿಯಾರದ ಬಳಿ ಗುರು ಸ್ವೀಟ್ಸ್ ಅಂಗಡಿಗೆ ಭೇಟಿಯಿತ್ತೆವು. ಇದು ಬಿಸಿಬಿಸಿಯಾದ, ಮೃದುವಾದ ಮೂಲ ಮೈಸೂರು ಪಾಕ್ ಸಿಹಿತಿಂಡಿಯನ್ನು ಮೊದಲು ತಯಾರಿಸಿದ ಕಾಕಾಸುರ ಮಾದಪ್ಪರ ವಂಶಸ್ಥರು ನಡೆಸುತ್ತಿರುವ ಮಳಿಗೆ ಎನ್ನುವುದು ವಿಶೇಷ. ಅಂಗಡಿ ಮಳಿಗೆಯಲ್ಲಿ ನಮ್ಮನ್ನು ಅತಿಥಿಗಳಂತೆ ಸತ್ಕರಿಸಿದ್ದು ನಮಗೆ ತುಂಬಾ ಸಂತೋಷಗೊಂಡೆವು. ತಿನ್ನಲು ಬಿಸಿ ಬಿಸಿ ಮೈಸೂರು ಪಾಕ್ ನೀಡಿ, ನಮ್ಮನ್ನು ತುಂಬಾ ಗೌರವದಾರಗಳಿಂದ ಮಾತನಾಡಿಸಿದ್ದು ನಮಗೆ ಅವಿಸ್ಮರಣೀಯ ಘಳಿಗೆ. ಇಳಿಸಂಜೆ ಹೊತ್ತಲ್ಲಿ ನಮ್ಮ ಪ್ರಯಾಣ ಸಿಟಿ ಬಸ್ ಸ್ಟಾಂಡ್‌ನಿಂದ ಕೆಆರ್‌ಎಸ್ ಕಡೆ ಹೊರಟಿತು. ಅಲ್ಲಿಂದ ಒಂದು ಗಂಟೆ ಪ್ರಯಾಣ. ಸಮಯದ ಅಭಾವದಿಂದಾಗಿ ನಾವು ಡ್ಯಾಂನಲ್ಲಿ ಕಾರಂಜಿ ನೃತ್ಯ ಪ್ರದರ್ಶನವನ್ನು ಮಾತ್ರ ನೋಡಿ ವಾಪಾಸ್ಸಾದೆವು. ಈ ನೀರಿನ ಕಾರಂಜಿಯ ನೃತ್ಯ ನಮ್ಮನ್ನು ರೋಮಾಂಚನಗೊಳಿಸಿತು. ಮಣಿಪಾಲ್‌ಗೆ ವಾಪಾಸ್ಸಾಗಲು ಬಸ್‌ಗೆ ಸಮಯವಾದ್ದರಿಂದ ಬೇಗನೇ ಅಲ್ಲಿಂದ ಹೊರಟೆವು. ಮೈಸೂರಿನ ಬೀದಿಯಲ್ಲಿ ಹೊಟೇಲ್‌ನಲ್ಲಿ ಊಟ ಮುಗಿಸಿಕೊಂಡು ನಮ್ಮ ಬಸ್ ಹಿಡಿದು ವಾಪಾಸ್ಸಾದೆವು.ಅಲ್ಪ ಅವಧಿಯ ಪ್ರವಾಸವಾದರೂ ದಿಢೀರಾಗಿ ಆಯೋಜಿತವಾದುದು, ವಿಶ್ವವಿಖ್ಯಾತ ಅರಮನೆಯನ್ನು ಪ್ರವೇಶಿಸಿದ್ದು, ಒಂದಿಡೀ ದಿನವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಕಳೆದುದು ಮನಸ್ಸಿಗೆ ನೆಮ್ಮದಿ ನೀಡಿತು. ರೂಟ್ ಮ್ಯಾಪ್
· ಮಂಗಳೂರಿನಿಂದ ಮೈಸೂರು 250 ಕಿ.ಮೀ. ದೂರವಿದ್ದು ಬಸ್, ಪ್ರತ್ಯೇಕ ವಾಹನದ ಮೂಲಕ ಪ್ರಯಾಣಿಸಬಹುದು.
·ಮೈಸೂರು ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಕ್ಷೇತ್ರವಾಗಿದ್ದು ಗೈಡ್‌ನ ಮಾರ್ಗದರ್ಶನ ಪಡೆಯುವುದು ಉತ್ತಮ.
· ಶ್ರೀರಂಗಪಟ್ಟಣ, ಬಾವಲಿ, ಊಟಿ, ಮಡಿಕೇರಿ, ಕೆಆರ್ ಎಸ್ ಡ್ಯಾಂ ಹತ್ತಿರದ ಪ್ರವಾಸಿತಾಣಗಳು.
·ಕ್ಯಾಬ್, ಖಾಸಗಿ ಬಸ್‌ಗಳ ವ್ಯವಸ್ಥೆ ಇದೆ. – ಕುದ್ಯಾಡಿ ಸಂದೇಶ್ ಸಾಲ್ಯಾನ್