Advertisement

ಪಂಚರಾಜ್ಯ ಚುನಾವಣೆಗೆ ಮೈಸೂರಿನ ಶಾಯಿ

03:50 AM Jan 19, 2017 | |

ಮೈಸೂರು: ದೇಶದ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆಗೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಚುನಾವಣೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್‌) 4.18 ಲಕ್ಷ ಬಾಟಲಿ
ಅಳಿಸಲಾಗದ ಶಾಯಿ ಪೂರೈಸುತ್ತಿದೆ.

Advertisement

ಕೇಂದ್ರ ಚುನಾವಣೆ ಆಯೋಗ 3 ತಿಂಗಳ ಹಿಂದೆಯೇ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಅಳಿಸಲಾಗದ ಶಾಯಿ ಪೂರೈಸಲು ಬೇಡಿಕೆ ಸಲ್ಲಿಸಿದೆ. ಆಗಿನಿಂದಲೇ ಮೈಲ್ಯಾಕ್‌ ಆಡಳಿತವರ್ಗ, ತನ್ನ 50 ಮಂದಿ ಕಾಯಂ ನೌಕರರ ಜತೆಗೆ,
ಹೊರ ಗುತ್ತಿಗೆಯಡಿ 100 ಜನ ಕಾರ್ಮಿಕರನ್ನು ನೇಮಕ ಮಾಡಿಕೊಂಡು ನಿತ್ಯ ಎರಡು ಪಾಳಿಗಳಲ್ಲಿ ಕೆಲಸ ಮಾಡಿಸುತ್ತಿದೆ. ಭಾನುವಾರದ ರಜೆ ದಿನ ಕೂಡ ಕೆಲಸ ಮಾಡಿಸಲಾಗುತ್ತಿದೆ.

ನೋಟು ಬದಲಾವಣೆ ವೇಳೆಯೂ ಪೂರೈಸಿತ್ತು: 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯದ ಘೋಷಣೆ ಮಾಡಿದ ನಂತರ ನೋಟು ಬದಲಾವಣೆಯಲ್ಲಿ ಸಾಕಷ್ಟು ಗೊಂದಲಗಳಾಗಿದ್ದವು. ಒಬ್ಬನೇ ವ್ಯಕ್ತಿ ಬೇರೆ ಬೇರೆಗುರುತಿನ ಚೀಟಿಗಳನ್ನು ಹಾಜರುಪಡಿಸಿ ನಾಲ್ಕೈದು ಬಾರಿ ಹಣ ಬದಲಾಯಿಸಿಕೊಳ್ಳುವ ಪ್ರಯತ್ನಗಳು ಕಂಡು ಬಂದಿದ್ದವು. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅಳಿಸಲಾಗದ ಶಾಯಿ ಹಚ್ಚುವ ತೀರ್ಮಾನ ಕೈಗೊಂಡು ಮೈಲಾಕ್‌ ಕಾರ್ಖಾನೆಗೆ ಶಾಯಿ ಪೂರೈಸುವಂತೆ ತಿಳಿಸಿತ್ತು. ಆಗ ಮೈಲಾಕ್‌ ಮೊಟ್ಟ ಮೊದಲ ಬಾರಿಗೆ ಚುನಾವಣೇತರ ಉದ್ದೇಶಕ್ಕೆ 3 ಲಕ್ಷ ಬಾಟಲಿಗಳನ್ನು ಪೂರೈಸಿತು. ಇದಾಗಿ ಒಂದು ತಿಂಗಳೊಳಗೆ ಚುನಾವಣೆ ನಿಮಿತ್ತ 4.18 ಲಕ್ಷ ಬಾಟಲಿ ಶಾಯಿ ಪೂರೈಸುವ ಜವಾಬ್ದಾರಿ ಹೊತ್ತು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಬೇಡಿಕೆ ಎಷ್ಟು?: ಪಂಚ ರಾಜ್ಯಗಳ ಚುನಾವಣೆಗೆ ಒಟ್ಟು 4,18,300 (10ಎಂ.ಎಲ್‌.ಸಾಮರ್ಥ್ಯದ) ಬಾಟಲಿ ಅಳಿಸಲಾಗದ ಶಾಯಿ ಪೂರೈಕೆಗೆ ಕೇಂದ್ರ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿದೆ.

ಈ ಪೈಕಿ ಫೆ.4ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿರುವ ಗೋವಾ ರಾಜ್ಯಕ್ಕೆ 4 ಸಾವಿರ ಬಾಟಲಿ, ಪಂಜಾಬ್‌ಗ 52 ಸಾವಿರ ಬಾಟಲಿ ಹಾಗೂ ಮಾ.4 ಮತ್ತು 8ರಂದು 2 ಹಂತಗಳಲ್ಲಿ ಮತದಾನ ನಡೆಯಲಿರುವ ಮಣಿಪುರ ರಾಜ್ಯಕ್ಕೆ 7,300 ಬಾಟಲಿ ಶಾಯಿಯನ್ನು ಈಗಾಗಲೇ ಪೂರೈಸಲಾಗಿದೆ.

Advertisement

ಫೆ.11ರಿಂದ ಮಾ.8ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿರುವ ಉತ್ತರ ಪ್ರದೇಶ ರಾಜ್ಯಕ್ಕೆ 3.30 ಲಕ್ಷ ಬಾಟಲಿ ಶಾಯಿ ಪೂರೈಸಬೇಕಿದೆ. ಈ ಪೈಕಿ ಸೋಮವಾರ (ಜ.16) ಮೊದಲ ಹಂತದಲ್ಲಿ 1 ಲಕ್ಷ ಬಾಟಲಿ ಶಾಯಿ ಕಳುಹಿಸಿದೆ. ಇನ್ನುಳಿದ 2.30 ಲಕ್ಷ ಬಾಟಲಿ ಶಾಯಿಯನ್ನು ಜ.23, 24ರಂದು ಕಳುಹಿಸಲಿದ್ದು, ಫೆ.15ರಂದು ಮತದಾನ ನಡೆಯಲಿರುವ ಉತ್ತರಾಖಂಡ ರಾಜ್ಯಕ್ಕೆ 25 ಸಾವಿರ ಬಾಟಲಿ ಶಾಯಿಗೆ ಬೇಡಿಕೆ ಇದ್ದು, ಈ ಮಾಸಾಂತ್ಯದ ವೇಳೆಗೆ ಪೂರೈಸಲಾಗುವುದು.

ದರವೆಷ್ಟು?
10 ಎಂ.ಎಲ್‌. ಬಾಟಲಿ ಶಾಯಿಗೆ 142ರೂ. ದರ ನಿಗದಿಪಡಿಸಲಾಗಿದ್ದು, ಒಂದು ಬಾಟಲಿಯಿಂದ 750 ಜನರ ಬೆರಳಿಗೆ ಶಾಯಿ ಹಚ್ಚಬಹುದು ಎಂದು ಮೈಲ್ಯಾಕ್‌ನ ಪ್ರಧಾನ ವ್ಯವಸ್ಥಾಪಕ ಹರಕುಮಾರ್‌ ತಿಳಿಸಿದ್ದಾರೆ.

ಯಾವುದೇ ಚುನಾವಣೆ ಸಂದರ್ಭದಲ್ಲೂ ನಿಗದಿತ ಸಮಯದೊಳಗೆ ಬೇಡಿಕೆಗೆ ತಕ್ಕಂತೆ ಅಳಿಸಲಾಗದ ಶಾಯಿ ಪೂರೈಸುವ ಮೂಲಕ ಮೈಲ್ಯಾಕ್‌ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ.ಪಂಚ ರಾಜ್ಯಗಳ ಚುನಾವಣೆಗೂ ನಿಗದಿತ ಸಮಯಕ್ಕೆ ಶಾಯಿ ಪೂರೈಸಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಾಗುವುದು.
– ಎಚ್‌.ಎ.ವೆಂಕಟೇಶ್‌,ಅಧ್ಯಕ್ಷರು, ಮೈಲ್ಯಾಕ್‌

Advertisement

Udayavani is now on Telegram. Click here to join our channel and stay updated with the latest news.

Next