Advertisement

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

09:34 PM Sep 16, 2021 | Team Udayavani |

ಬೆಂಗಳೂರು: ಸರ್ಕಾರ ಮತ್ತು ಸಾಮಾನ್ಯ ಜನರು ಬೆಲೆ ಏರಿಕೆಯ ಸಂಕಷ್ಟದಲ್ಲಿ ಇರುವಾಗ ಕೆಲವು ಅಧಿಕಾರಿಗಳು ಲೂಟಿ ಹೊಡೆದು ಶೋಕಿ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಆರೋಪಿಸಿದ್ದಾರೆ.

Advertisement

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬೆಲೆ ಏರಿಕೆಯ ಕುರಿತು ಮಾತನಾಡುತ್ತಿರು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ ಹಣ ಬಾಕಿ ಉಳಿದಿರುವ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಾ.ರಾ. ಮಹೇಶ್‌, ಮೈಸೂರು ಜಿಲ್ಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಅಧಿಕಾರ ವಿಕೇಂದ್ರಿಕರಣದ ಎಲ್ಲ ಅಧಿಕಾರವನ್ನು ಮೊಟಕುಗೊಳಿಸಿ ಹೆಚ್ಚಿನ ದರ ನೀಡಿ 15 ಲಕ್ಷ ಬ್ಯಾಗ್‌ ಖರೀದಿ ಮಾಡಿದ್ದಾರೆ. ಇದರಿಂದ 6.5 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದರು.

ನಾವೇನಾದರೂ ಲೂಟಿ ಮಾಡಿದ್ದರೆ ಜನರಿಗಾದರೂ ಕೊಡುತ್ತೇವೆ. ಇವರು ಲೂಟಿ ಮಾಡಿದರೆ ಯಾರಿಗೆ ಕೊಡುತ್ತಾರೆ. ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಎಲ್ಲರ ಅಧಿಕಾರವಧಿಯಲ್ಲಿಯೂ ಇವರೇ ಇರುತ್ತಾರೆ. ಒಬ್ಬೊಬ್ಬ ಅಧಿಕಾರಿಗಳ ಬಳಿ 500 ಕೋಟಿ ರೂ. ಆಸ್ತಿ ಇದೆ. ಇಲ್ಲಿ ಲೂಟಿ ಮಾಡಿ ಆಂಧ್ರದಲ್ಲಿ ಆಸ್ತಿ ಮಾಡುತ್ತಿದ್ದಾರೆ. ನಿವೃತ್ತರಾದ ಮೇಲೆ ಮತ್ತೆ ನಮ್ಮ ಎದುರು ಚುನಾವಣೆಗೆ ಸ್ಪರ್ಧಿಸುತ್ತಾರೆ. ಐಎಎಸ್‌ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಸಾ.ರಾ. ಮಹೇಶ್‌ ಆಗ್ರಹಿಸಿದರು.

ಇದನ್ನೂ ಓದಿ:ವೇಷ ಹಾಕಿ ಸಂಗ್ರಹಿಸಿದ 7 ಲಕ್ಷ ರೂ. ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ ರವಿ ಕಟಪಾಡಿ 

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌. ಅಶೊಕ್‌ ಮಧ್ಯ ಪ್ರವೇಶಿಸಿ, ಶಾಸಕರು ಈ ಪ್ರಕರಣವನ್ನು ಹಕ್ಕುಚ್ಯುತಿಗೆ ನೀಡಿದ್ದಾರೆ ಆ ಸಂದರ್ಭ ಬಂದಾಗ ಅವರು ಚರ್ಚಿಸಲಿ ಎಂದು ಹೇಳಿದರು.

Advertisement

ಎಚ್‌.ಡಿ. ಕುಮಾರಸ್ವಾಮಿ ಸಾ.ರಾಮಹೇಶ್‌ಗೆ ಬೆಂಬಲ ವ್ಯಕ್ತಪಡಿಸಿ, ಒಬ್ಬ ಸರ್ಕಾರಿ ಅಧಿಕಾರಿ ಒಬ್ಬ ಜನಪ್ರತಿನಿಧಿ ವಿರುದ್ಧ ನೇರವಾಗಿ ಮಾಧ್ಯಮಗಳ ಮುಂದೆ ಮಾತನಾಡುವ ಅಧಿಕಾರ ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಯಾವ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕೇಳಿದರು.

ಸ್ಪೀಕರ್‌ ಕಾಗೇರಿ ಕೂಡ ಅವರ ಮಾತಿಗೆ ಧ್ವನಿಗೂಡಿಸಿ, ಈ ಬಗ್ಗೆ ನಾನು ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ್ದೇನೆ. ಅವರು ಅಧಿಕಾರಿಗಳು ಅನಗತ್ಯ ಹೇಳಿಕೆ ನೀಡುವುದನ್ನು ತಡೆಯುವಂತೆ ಸೂಚಿಸಿದ್ದೇನೆ ಎಂದರು.

ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ತಿಕ್ಕಾಟ ನಡೆಯುತ್ತಿರುವಾಗ ಮುಖ್ಯ ಕಾರ್ಯದರ್ಶಿಯೇ ಮೈಸೂರಿಗೆ ಹೋಗುತ್ತಾರೆ ಎಂದರೆ, ಇದು ಯಾವ ರೀತಿಯ ಆಡಳಿತ ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ಕೆಲವು ಅಧಿಕಾರಿಗಳು ಪ್ರಚಾರದ ಹುಚ್ಚಿನಿಂದ ಓವರ್‌ ಆ್ಯಕ್ಟ್ ಮಾಡುತ್ತಿದ್ದಾರೆ ಇನ್ನು ಮುಂದೆ ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ, ಮುಖ್ಯಮಂತ್ರಿಗಳು ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next