Advertisement

ಮೈಸೂರು ದಸರಾ; ಕೇತ್ರದ ಎಂಎಲ್‌ಎಗೇ ವೇದಿಕೆ ಮೇಲೆ ಸ್ಥಾನವಿಲ್ಲ

12:51 PM Sep 27, 2022 | Team Udayavani |

ಮೈಸೂರು: ಐತಿಹಾಸಿಕ ಮೈಸೂರು ದಸರಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸ ಬೇಕಿದ್ದ ಸ್ಥಳೀಯ ಶಾಸಕರನ್ನೇ ವೇದಿಕೆಯಿಂದ ದೂರವಿರಿಸಿದ ಪ್ರಸಂಗ ಸೋಮವಾರ ದಸರಾ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು.

Advertisement

ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಡೆಯುವ ಪ್ರದೇಶದ ಸ್ಥಳೀಯ ಶಾಸಕರನ್ನೇ ಸಮಾರಂಭದ ಅಧ್ಯಕ್ಷತೆ ವಹಿಸ ಬೇಕೆಂಬ ನಿಯಮವಿದೆ. ಆದರೆ, ಚಾಮುಂಡಿ ಬೆಟ್ಟದಲ್ಲಿ ಸೋಮವಾರ ನಡೆದ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇ ವೇಗೌಡ ಅವರನ್ನೇ ವೇದಿಕೆಯಿಂದ ದೂರ ಇರಿಸಿ ವೇದಿಕೆಯ ಕೆಳಭಾಗದಲ್ಲಿ ಶಾಸಕರಿಗಾಗಿ ಮೀಸಲಿರಿಸಿದ್ದ ಸಾಲಿನಲ್ಲಿ ಕೂರಿಸಲಾಯಿತು. ರಾಜ್ಯ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರೇ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನಮೂದಿಸಲಾಗಿತ್ತು. ಈ ಹಿಂದಿನ ದಸರಾ ಸಮಾರಂಭಗಳಲ್ಲಿ ಸ್ಥಳೀಯ ಶಾಸಕರೇ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾರೆ.

ಸಮಾರಂಭ ಆರಂಭಕ್ಕೂ ಮುನ್ನ ವೇದಿಕೆ ಮೇಲೆ 13 ಆಸನಗಳಿದ್ದವು. ಆದರೆ, ರಾಷ್ಟ್ರಪತಿಯವರು ವೇದಿಕೆಗೆ ಆಗಮಿಸುವ 15 ನಿಮಿಷಗಳ ಮುನ್ನ ಅಧಿಕಾರಿಯೊಬ್ಬರು ವೇದಿಕೆ ಏರಿ ಅಲ್ಲಿ ಏಳು ಆಸನಗಳನ್ನು ಮಾತ್ರವಿರಿಸಿ ಉಳಿದ ಆಸನಗಳನ್ನು ತೆಗೆಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮೈಸೂರಿನ ಪ್ರಥಮ ಪ್ರಜೆಯಾದ ಮೇಯರ್‌ ಶಿವಕುಮಾರ್‌ ಅವರಿಗೆ ವೇದಿಕೆ ಮೇಲೆ ಆಸನ ಕಲ್ಪಿಸಲಿಲ್ಲ. ಹೀಗಾಗಿ, ಇವರಿಬ್ಬರೂ ವೇದಿಕೆ ಏರದೇ ಶಾಸಕರಿಗಾಗಿ ಮೀಸಲಿರಿಸಿದ್ದ ವೇದಿಕೆ ಕೆಳಭಾಗದಲ್ಲಿ ಉಳಿದ ಶಾಸಕರ ಜೊತೆ ಆಸೀನರಾದರು.

ಹಾಗೆ ನೋಡಿದರೆ ಸಮಾರಂಭ ಆರಂಭಕ್ಕೂ ಮುನ್ನ ಶಾಸಕ ಜಿ.ಟಿ.ದೇವೇಗೌಡ ವೇದಿಕೆ ಏರಿ ನೆರೆದಿದ್ದ ಸಭಿಕರಿಗೆ ಕೈಬೀಸಿ ವೇದಿಕೆಯಿಂದ ಕೆಳಗಿಳಿದಿದ್ದರು. ಆದರೆ, ಸಮಾರಂಭ ಆರಂಭಕ್ಕೂ ಕೆಲವೇ ನಿಮಿಷಗಳ ಮುನ್ನ ಅವರಿಗೆ ವೇದಿಕೆ ಮೇಲೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಹೀಗಾಗಿ, ಜಿ.ಟಿ.ದೇವೇಗೌಡರು ವೇದಿಕೆ ಕೆಳಭಾಗದಲ್ಲಿ ಕುಳಿತು ಸಮಾರಂಭವನ್ನು ವೀಕ್ಷಿಸಿದರು. ಆಹ್ವಾನ ಪತ್ರಿಕೆಯ ಪ್ರಕಾರವೇ ಅಧ್ಯಕ್ಷತೆ ವಹಿಸಬೇಕಿದ್ದವರು ಸಭಿಕರ ಸಾಲಿನಲ್ಲಿ ಕುಳಿತು ಸಮಾರಂಭ ವೀಕ್ಷಿಸಬೇಕಾಯಿತು.

ಮೈಸೂರಿನ ಪ್ರಥಮ ಪ್ರಜೆಗೆ ಆಸನವಿಲ್ಲ
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸೋಮವಾರ ನಡೆದ ಮೈಸೂರು ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಪ್ರಥಮ ಪ್ರಜೆ ಮೇಯರ್‌ ಶಿವಕುಮಾರ್‌ ಅವರನ್ನೇ ವೇದಿಕೆಯಿಂದ ದೂರವಿರಿಸಿದ ಪ್ರಸಂಗ ನಡೆಯಿತು.

Advertisement

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಲು ಮೇಯರ್‌ ಶಿವಕುಮಾರ್‌ ಮೇಯರ್‌ ಗೌನು ಧರಿಸಿ ಆಗಮಿಸಿ ದ್ದರು. ಆದರೆ, ಮೈಸೂರಿನ ಮೇಯರ್‌ ಅವರಿಗೆ ವೇದಿಕೆ ಮೇಲೆ ಆಸೀನರಾಗಲು ಅವಕಾಶವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ, ಶಿವಕುಮಾರ್‌ ಮೇಯರ್‌ ಗೌನನ್ನು ತೆಗೆದು ವೇದಿಕೆ ಕೆಳ ಭಾಗದಲ್ಲಿ ಶಾಸಕರಿಗಾಗಿ ಮೀಸಲಿರಿಸಿದ್ದ ಜಾಗದಲ್ಲಿ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಂಸದ ಪ್ರತಾಪ ಸಿಂಹ ಅವರ ಜೊತೆ ಕುಳಿತುಕೊಂಡು ಸಮಾರಂಭ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next