ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಸಂಬಂಧ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನವರಿ ಮೊದಲ ವಾರದಲ್ಲಿ ಮೈಸೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ. ಶಿವಕುಮಾರ್ ಡಿ.23 ರಂದು ತಲಕಾವೇರಿಗೆ ಆಗಮಿಸಿ ಡಿ.24 ರಂದು ಪೂಜೆ ಸಲ್ಲಿಸುವರು.
ನಂತರ ಹೊಳೇನರಸೀಪುರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಸುವರು. ಹಾಸನ, ಬಾಳುಪೇಟೆ, ಚನ್ನರಾಯ ಪಟ್ಟಣದಲ್ಲಿ ಡಿ.25ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುವರು. ತುಮಕೂರಿನಲ್ಲಿ ಡಿ.26, ಮಂಡ್ಯ ಜಿಲ್ಲೆ ಶಿವಪುರದಲ್ಲಿ ಡಿ.28ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧ ಲಕ್ಷ್ಮಣ್ ವಾಗ್ಧಾಳಿ ನಡೆಸಿದರು.
ಮಾಧ್ಯಮದ ಮುಂದೆ ಬರದೇ ಹೊದರೆ ನೀವು ಕಳೆದು ಹೋಗುತ್ತೀರಾ. ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರ ನಿಮ್ಮನ್ನು ಗುರುತಿಸಲಾಗುತ್ತದೆ. ಮೇಕೆದಾಟು ವಿಚಾರದಲ್ಲಿ ನಿಮ್ಮ ನಿಲುವು ಏನು? ತಮಿಳುನಾಡಿನಲ್ಲಿ ಬಿಜೆಪಿಯ ಉಸ್ತುವಾರಿಯನ್ನು ನೀವೇ ವಹಿಸಿಕೊಂಡಿದ್ದೀರಿ. ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಮೇಕೆದಾಟು ಯೋಜನೆ ಬಲಿ ಕೊಡುತ್ತಿದ್ದೀರಿ. ನಿಮ್ಮ ರಾಜಕೀಯಕ್ಕಾಗಿ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಸಿ.ಟಿ.ರವಿ ಅವರನ್ನು ಟೀಕಿಸಿದರು.
ರಾಜ್ಯ ಸರ್ಕಾರದ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿದ ಅವರು, ಯಾವುದೇ ವ್ಯಕ್ತಿ ತನ್ನ ಇಚ್ಛೆಗೆ ಅನುಗುಣವಾಗಿ ಧರ್ಮ ಅನುಸರಿಸುವ ಅವಕಾಶ ಇದೆ. ಹೀಗಾಗಿ, ಮತ್ತೂಂದು ಕಾಯ್ದೆಯ ಅವಶ್ಯಕತೆಯಿಲ್ಲ. ಈ ದೇಶ ಯಾವುದೇ ಒಂದು ಧರ್ಮದ ಆಚರಣೆಗೆ ಸೀಮಿತವಾದ ರಾಷ್ಟ್ರವಲ್ಲ ಎಂದರು. ಬಿಜೆಪಿ ಅಲ್ಪಸಂಖ್ಯಾತರನ್ನು, ಕ್ರಿಶ್ಚಿಯನ್ ರನ್ನು ಗುರಿಯಾಗಿಸಿಕೊಂಡು ಈ ಕಾಯ್ದೆ ಜಾರಿಗೆ ತಂದಿದೆ.
ಮತಾಂತರ ಗೊಳ್ಳುವವರು ಅವರ ಸಂಬಂಧಿಕರ ಅನುಮತಿ ಪಡೆಯಬೇಕು. ಯಾರು ಬೇಕಾದರೂ ಪ್ರಶ್ನೆ ಮಾಡಬಹುದು ಎಂಬ ಅಂಶ ಇದರಲ್ಲಿ ಇದೆ. ಇದು ಆತಂಕ ಸೃಷ್ಟಿ ಸಂಗತಿ.. ಈ ಕಾಯ್ದೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಈ ಕುರಿತು ಮಸೂದೆಯ ಪ್ರತಿಯನ್ನು ಲಕ್ಷ್ಮಣ್ ಹರಿದು ಹಾಕಿದರು.