ಮೈಸೂರು: ಜಿಲ್ಲೆಯಲ್ಲಿ ಪ್ರತಿದಿನ 10 ಸಾವಿರ ಕೋವಿಡ್ ಟೆಸ್ಟ್ ಮಾಡುವ ಗುರಿ ಹೊಂದಿದ್ದು, ಕೋವಿಡ್ ನಿರ್ವಹಣೆಗೆ ವಿಶೇಷ ಕಾರ್ಯಪಡೆ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆ ಹಾಸಿಗೆಗಳ ಪಾರದರ್ಶಕ ವ್ಯವಸ್ಥೆಗೆ ಬೆಂಗಳೂರು ಮಾದರಿಯಲ್ಲಿ ಆ್ಯಪ್ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲೂ ಶೇ.50ರಷ್ಟು ಬೆಡ್ ಗಳನ್ನುಕೋವಿಡ್ ಚಿಕಿತ್ಸೆಗಾಗಿ ಕಾಯ್ದಿರಿಸಬೇಕು ಎಂದರು.
ಹಳೇವರದಿಹಿನ್ನೆಲೆ ಪಾಸಿಟಿವ್ ಸಂಖ್ಯೆಹೆಚ್ಚಳ: ಹೊರಗುತ್ತಿಗೆ ನೌಕರರ ಪ್ರತಿಭಟನೆಯಿಂದಾಗಿ ಕೋವಿಡ್ ಪ್ರಕರಣಗಳ ಅಪ್ ಡೇಟ್‌ಗೆ ಹಿನ್ನಡೆಯಾಗಿತ್ತು. ಇದೀಗ ಹಳೆ ಪ್ರಕರಣಗಳನ್ನೂ ಅಪ್‌ಡೇಟ್ ಮಾಡಲಾಗುತ್ತಿದೆ. ಹಾಗಾಗಿ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ ಎಂದು ಹೇಳಿದರು.
ಕಳೆದ 12 ದಿನಗಳಿಂದ ಹೊರಗುತ್ತಿಗೆ ನೌಕರರ ಪ್ರತಿಭಟನೆಯಿಂದಾಗಿ ಕೊರೊನಾ ಪ್ರಕರಣಗಳ ಅಪ್‌ಡೇಟ್‌ಗೆ ಹಿನ್ನಡೆಯಾದ ಹಿನ್ನೆಲೆ ಹಳೆ ಪ್ರಕರಣಗಳನ್ನೂ ಅಪ್‌ಡೇಟ್ ಮಾಡುತ್ತಿರುವುದರಿಂದ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಸೋಮವಾರವೂ 910 ಮಂದಿಯಲ್ಲಿ ಸೋಂಕು ಹರಡಿರುವುದು ದೃಢಪಟ್ಟಿದ್ದು, 8 ಮಂದಿ ಮೃತಪಟ್ಟಿದ್ದಾರೆ.
910 ಮಂದಿಗೆ ಸೋಂಕು ದೃಢ : ಮೈಸೂರು ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ಎಂದಿನಂತೆ ಮುಂದುವರಿದಿದ್ದು, 910 ಹೊಸ ಪಾಸಿಟಿವ್ ಕೇಸ್‌ಗಳಿಂದ ಒಟ್ಟು ಸೋಂಕಿತರ ಸಂಖ್ಯೆ 38,238ಕ್ಕೆ ಏರಿಕೆಯಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಸೋಂಕಿಗೆ8 ಮಂದಿ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 818ಕ್ಕೆ ಹೆಚ್ಚಳವಾಗಿದೆ. ಪಾಸಿಟಿವ್ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಜೊತೆ ಜೊತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆ ಜನತೆ ತುಸು ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ 427 ಮಂದಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ29,208 ಮಂದಿ ಗುಣಮುಖರಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ 8,212 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.