ಮೈಸೂರು: ನಗರದಲ್ಲಿ ಬುಧವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಮುಖಾಮುಖೀ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ 3 ದಿನಗಳಿಂದ ಪತ್ನಿ ಜತೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ, ವಿಶ್ರಾಂತಿ ಪಡೆಯುತ್ತಿದ್ದ ದಿಗ್ವಿಜಯ ಸಿಂಗ್ ಬುಧವಾರ ಮೈಸೂರಿಗೆ ಆಗಮಿಸಿದರು. ದಿ. ಎಚ್.ಎಸ್.ಮಹದೇವಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ, ನಂತರ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದರು. ಇದೇ ವೇಳೆ ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡ, ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವಿಷಯ ತಿಳಿದ ದಿಗ್ವಿಜಯ ಸಿಂಗ್, ಅಲ್ಲಿಗೇ ಬಂದು ಗೌಡರ ಜೊತೆ ಮಾತುಕತೆ ನಡೆಸಿದರು. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿಗೆ ಮಹತ್ವ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಹದೇವ ಪ್ರಸಾದ್ ಮನೆಗೆ ಭೇಟಿ: ಇದಕ್ಕೂ ಮೊದಲು, ಅಕಾಲಿಕ ಮರಣಕ್ಕೆ ತುತ್ತಾದ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ನಿವಾಸಕ್ಕೆ ಭೇಟಿ ದಿಗ್ವಿಜಯ್ ಸಿಂಗ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಮಹದೇವಪ್ರಸಾದ್ ನಿವಾಸಕ್ಕೆ ಪತ್ನಿ ಅಮೃತಾರಾಯ್ ಜತೆಗೆ ಆಗಮಿಸಿದ ಅವರು, ಮಹದೇವ ಪ್ರಸಾದ್ ಪತ್ನಿ ಡಾ.ಗೀತಾ, ಪುತ್ರ ಗಣೇಶ್ ಪ್ರಸಾದ್‌ರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಾದ್ ಅವರ ನಿಧನದ ಸಂದರ್ಭದಲ್ಲಿ ಕಾರ್ಯನಿಮಿತ್ತ ಮೈಸೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ ಎಂದರು.
ಕಾಲಿಗೆ ಬೀಳುವುದೂ ಬೇಡ, ಕಾಲೆಳೆಯುವುದೂ ಬೇಡ’
ಶ್ರೀರಂಗಪಟ್ಟಣ/ ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತಹಾಕಿ ಜೆಡಿಎಸ್ ನಿಂದ ಅಮಾನತುಗೊಂಡಿರುವ ಶಾಸಕ ಎನ್. ಚೆಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರೆಸಾಟ್ ìನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದರು. ಬುಧವಾರ ಮೈಸೂರಿಗೆ ತೆರಳುತ್ತಿದ್ದ ದೇವೇಗೌಡರು, ಮಾರ್ಗಮಧ್ಯೆ ಶ್ರೀರಂಗಪಟ್ಟಣದ ಮಯೂರ ರೆಸಾರ್ಟ್‌ನಲ್ಲಿ ವಿಶ್ರಾಂತಿಗಾಗಿ ಆಗಮಿಸಿದ್ದರು. ಇದಕ್ಕೂ ಮೊದಲೇ ರೆಸಾರ್ಟ್‌ನಲ್ಲಿ ಚೆಲುವರಾಯಸ್ವಾಮಿ ದಂಪತಿ ದೇವೇಗೌಡರನ್ನು ಭೇಟಿ ಮಾಡಿದರೆನ್ನಲಾಗಿದೆ. ಧನಲಕ್ಷ್ಮೀ, ದೇವೇಗೌಡರ ಕಾಲಿಗೆ ಬಿದ್ದು
ಆಶೀರ್ವಾದ ಪಡೆದರು. ಜತೆಯಲ್ಲಿದ್ದ ಚೆಲುವರಾಯಸ್ವಾಮಿ ಗೌಡರಿಗೆ ನಮಸ್ಕರಿಸಿ, ಮಾತನಾಡಿಸಲು ಪ್ರಯತ್ನಿಸಿದರೂ ಇದಕ್ಕೆ ಕ್ಯಾರೆ ಎನ್ನದೇ “ನೀವು ಕಾಲಿಗೆ ಬೀಳುವುದೂ ಬೇಡ, ಕಾಲೆಳೆಯುವುದೂ ಬೇಡ’ ಎಂದು ಅಲ್ಲಿಂದ ದೇವೇಗೌಡರು ನಿರ್ಗಮಿಸಿದರು ಎನ್ನಲಾಗಿದೆ.