ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಗಜ ಪಡೆಯನ್ನು ಅಣಿಗೊಳಿಸುವ ಕಾರ್ಯ ನಡೆಯು ತ್ತಿದ್ದು, ಪ್ರಮುಖ ಆನೆಗಳಿಗೆ ಮರದ ಅಂಬಾರಿ ತಾಲೀಮು ಹಾಗೂ ಕುಶಾಲ ತೋಪು ತಾಲೀಮಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾಪ್ಟನ್ ಅಭಿಮನ್ಯು, ಭೀಮ, ಮಹೇಂದ್ರ, ಧನಂಜಯ, ಗೋಪಿ, ಸುಗ್ರೀವ ಆನೆಗಳಿಗೆ ಒಣ ತಾಲೀಮು, ಬಾರ ಹೊರುವ ತಾಲೀಮು ನಡೆಸಿದ್ದಾರೆ. ಸೆ.15ರ ಬಳಿಕ ಈ ಆನೆಗಳಿಗೆ ಮರದ ಅಂಬಾರಿ ಹೊರುವ ತಾಲೀಮು ನಡೆಸಲು ಅಣಿಯಾಗಿದ್ದು, ಅದಕ್ಕಾಗಿ ಪೌಷ್ಟಿಕ ಆಹಾರ ನೀಡುವ ಮೂಲಕ ಎಲ್ಲಾ ಆನೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. 850 ಕೆ.ಜಿ.ಗೂ ಹೆಚ್ಚು ಭಾರದ ಮರದ ಅಂಬಾರಿ: ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 850 ಕೆ.ಜಿ.ಗೂ ಹೆಚ್ಚು ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಲಿದ್ದಾನೆ. ಬಳಿಕ ಭೀಮಾ, ಮಹೇಂದ್ರ, ಗೋಪಿ, ಧನಂಜಯ ಆನೆಗಳು ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ. ಈ ಮಧ್ಯೆ ಭೀಮ, ಮಹೇಂದ್ರ, ಧನಂಜಯ, ಗೋಪಿ ಹಾಗೂ ಸುಗ್ರೀವ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲು ನಿರ್ಧರಿಸಲಾಗಿದೆ. ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ, ಲಕ್ಷ್ಮೀ, ವರಲಕ್ಷ್ಮೀ ಮತ್ತು ಏಕಲವ್ಯ ಆನೆ ಈಗಾಗಲೇ ಅರಮನೆ ಪ್ರವೇಶಿಸಿದ್ದವು. ಬಳಿಕ ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ್, ಲಕ್ಷ್ಮೀ, ಹಿರಣ್ಯ ಆನೆಗಳು ಬಂದು ಠಿಕಾಣಿ ಹೂಡಿವೆ. ಇದೀಗ ಎಲ್ಲಾ ಆನೆಗಳು ತಾಲೀಮು ನಡೆಸುವ ಮೂಲಕ ಹೊಂದಿಕೊಂಡಿವೆ.
ಭಾನುವಾರ ಫಿರಂಗಿ ತಾಲೀಮು?: ಜಂಬೂ ಸವಾರಿಯ ದಿನದಂದು ಚಿನ್ನದಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ವೇಳೆ 7 ಕುಶಾಲತೋಪಿನಿಂದ ತಲಾ ಮೂರು ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸಲಾಗುತ್ತಿದೆ. ಈ ವೇಳೆ ಹೊರಹೊಮ್ಮುವ ಭಾರಿ ಶಬ್ಧಕ್ಕೆ ಗಜಪಡೆ ಮತ್ತು ಅಶ್ವದಳ ಬೆಚ್ಚದಂತೆ ಪ್ರತಿ ವರ್ಷದಂತೆ ಈ ಬಾರಿಯೂ ಗಜಪಡೆಗೆ ಕುಶಾಲುತೋಪಿನ ತಾಲೀಮು ನಡೆಸಲಾಗುತ್ತಿದೆ. ಅದಕ್ಕಾಗಿ ಸೆ.15ರ ನಂತರ ನಡೆಸಲು ನಿರ್ಧರಿಸಲಾಗಿದೆ.
ಆದರೆ, 16ರಂದು ಸರ್ಕಾರಿ ರಜೆ, 17 ಮಂಗಳವಾರವಾದ್ದರಿಂದ 15ರಂದೇ ನಡೆಸುವ ಸಾಧ್ಯತೆಗಳಿವೆ. ಈ ಸಂಬಂಧ ಅರಮನೆ ಮಂಡಳಿಯ ಕುಶಾಲುತೋಪುಗಳನ್ನು ಪೊಲೀಸ್ ಇಲಾಖೆಯವರು ಪಡೆದುಕೊಂಡಿದ್ದು, ಕುಶಾಲುತೋಪಿನ ತಾಲೀಮು ಆರಂಭಿಸುವ ಸಂಬಂಧ ಗುರುವಾರ ಅಂಬಾ ವಿಲಾಸ ಅರಮನೆಯ ಅಂಗಳದಲ್ಲಿ ಎಲ್ಲ ಫಿರಂಗಿ ಗಾಡಿಗಳಿಗೆ ಜಿಲ್ಲಾಡಳಿತ, ಅರಮನೆ ಮಂಡಳಿ ಹಾಗೂ ಪೊಲೀಸರಿಂದ ಪೂಜೆ ಸಲ್ಲಿಸಲಾಗುತ್ತದೆ. ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಹಾಗೂ ಪುರೋಹಿತ ರಾದ ಪ್ರಹ್ಲಾದ್ ರಾವ್ ಶಾಸ್ತ್ರೋಕ್ತವಾಗಿ ಕುಂಬಳಕಾಯಿ ಒಡೆಯುವ ಮೂಲಕ ಫಿರಂಗಿಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಗಾಯಗೊಂಡಿದ್ದ ಕಂಜನ್ ಆನೆ ಚೇತರಿಕೆ ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಿದ್ದ ದುಬಾರೆ ಸಾಕಾನೆ ಶಿಬಿರದ ಕಂಜನ್ ಆನೆ ಲಾರಿ ಯಿಂದ ಇಳಿಯುವ ಕಾಲಿಗೆ ಪೆಟ್ಟಾಗಿ, ಕುಂಟುತ್ತಾ ಓಡಾಡುತ್ತಿತ್ತು. ಪರಿಣಾಮ ಆನೆಗಳಿಗೆ ಒಣ ತಾಲೀಮು ಮತ್ತು ಭಾರ ಹೊರುವ ತಾಲೀಮಿನಿಂದ ಕಂಜನ್ ಆನೆಯನ್ನು ದೂರ ಇರಿಸಿ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಸಂಪೂರ್ಣ ಚೇತರಿಸಿಕೊಂಡಿರುವ ಕಂಜನ್ ತಾಲೀಮಿನಲ್ಲಿ ಭಾಗಿಯಾಗುತ್ತಿದ್ದಾನೆ.
ಅಭಿಮನ್ಯು ನೇತೃತ್ವದಲ್ಲಿ ಆಯ್ದ ಆನೆಗಳಿಗೆ ಭಾರ ಹೊರುವ ತಾಲೀ ಮು ನಡೆಸಲಾಗುತ್ತಿದ್ದು, ಸೆ.15ರ ಬಳಿಕ ಮರದ ಅಂಬಾರಿ ಹೊರುವ ತಾಲೀಮಿನ ಜತೆಗೆ, ಕುಶಾಲ ತೋಪಿನ ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಧ್ಯಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ 500 ರಿಂದ 550 ಕೆ.ಜಿ. ಭಾರ ಹೊರುವ ತಾಲೀಮುನ್ನು ಯಶಸ್ವಿಯಾಗಿ ನಡೆಸಿವೆ.
●ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್
-ಸತೀಶ್ ದೇಪುರ