Advertisement
ಕುತೂಹಲ ಕಡಿಮೆಯಾಗಿಲ್ಲ…ದಸರಾದಲ್ಲಿ ನಮ್ಮ ಮನೇಲಿ ಗೊಂಬೆ ಕೂರಿಸೋದು. ಅದಕ್ಕಾಗಿ ವರ್ಷ ಪೂರ್ತಿ ಗೊಂಬೆಗಳನ್ನು ಕೂಡಿಡೋದು. 9 ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ಇದ್ದಬದ್ದ ಗೊಂಬೆಗಳನ್ನೆಲ್ಲಾ ಜೋಡಿಸೋದು. ಹಿನ್ನೆಲೆಗೆ ಲೈಟು ಬಿಡೋದು. ಮನೆಗೆ ಬಂದವರಿಗೆ ಸಕ್ಕರೆ ಬೆಲ್ಲ ಕೊಡೋದು. ಪ್ರತಿ ವರ್ಷ ಹೀಗೆ ಮಾಡುತ್ತಲೇ ರೋಮಾಂಚನ ಹಾಗೂ ಸಂಭ್ರಮದ ಜೊತೆ ಜೊತೆಗೇ ಹಬ್ಬವಾಗುತ್ತಿತ್ತು. ಮೈಸೂರಲ್ಲಿ ದಸರ ನಡೆಯುತ್ತಂತೆ, ದೊಡ್ಡ ದೊಡ್ಡ ಗೊಂಬೆಗಳನ್ನೂ ಕೂರಿಸಿರುತ್ತಾರಂತೆ, ರಾಜರು ಅಂಬಾರಿ ಮೇಲೆ ಬರ್ತಾರಂತೆ. ಅದೂ ಚಿನ್ನದ ಅಂಬಾರಿಯಂತೆ…
Related Articles
-ಹಂಸಲೇಖ, ಹಿರಿಯ ಸಂಗೀತನಿರ್ದೇಶಕ
Advertisement
*****ಹೊಸ ಚಡ್ಡಿ ಷರಟು ಹಾಕ್ಕೊಂಡು ಹೋಗಿದ್ದೆ…
ಆಗಿನ್ನೂ ಚಿಕ್ಕ ಹುಡುಗ. ಅಪ್ಪನ ಜೊತೆ ದಸರಾ ನೋಡಲು ಹೊಳೆ ನರಸೀಪುರದಿಂದ ರೈಲಲ್ಲಿ ಮೈಸೂರು ತಲುಪಿಕೊಂಡೆವು. ದಸರಾ ಅಂದರೆ ಅದೇನೋ ಖುಷಿ. ಏಕೆಂದರೆ ನಮಗೆ ಹೊಸ ಬಟ್ಟೆ ಸಿಗುತ್ತೆ, ಲೈಟುಗಳಿಂದ ಶೃಂಗರಿಸಿದ ಊರನ್ನು ನೋಡಬಹುದು ಅಂತ. ಆವತ್ತೂ ಅಪ್ಪ ನನಗೆ ಚಡ್ಡಿ, ಷರರ್ಟು ಕೊಡಿಸಿದ್ದರು.
ಈ ಸಲ ದಸರಾಕ್ಕೆ ಹೋಗೋಣ ಅಂತ ಅಪ್ಪ ಹೇಳಿದ್ದೇ ತಡ, ಮನಸ್ಸು ರಂಗೇರಿತು. ದಸರಾ ಅಂದರೆ ಅದು ಜನಸ್ತೋಮ ಅಂತ ಗೊತ್ತಿತ್ತು. ಆದರೆ ಈ ಮಟ್ಟಿಗೆ ಅಂತ ಗೊತ್ತಿರಲಿಲ್ಲ. ರೈಲು ಇಳಿದು ಊರ ಒಳಗೆ ಹೆಜ್ಜೆ ಹಾಕುತ್ತಿದ್ದಂತೆ ಜಂಗುಳಿ ಹೆಚ್ಚಾಗುತ್ತಾ ಹೋಯ್ತು. ಜಟಕಾಗಳ ಸಪ್ಪಳ ಜೋರಾಗಿತ್ತು. ಮನಸ್ಸಲ್ಲಿ ಅಚ್ಚೊತ್ತಿದ್ದ ಅಂಬಾರಿ, ಆನೆಗಳನ್ನು ಕಣ್ಣುಗಳು ಪ್ರತಿ ಬೀದಿಯಲ್ಲಿ ಹುಡುಕಾಡಿದವು. ಅಪ್ಪ, ಅದ್ಯಾವುದೋ ಹೋಟೆಲ್‌ನಲ್ಲಿ ತಿಂಡಿ ಕೊಡಿಸಿದರು. ನಮ್ಮ ಸಂಬಂಧಿಕರು ಅಂತೇನೂ ಮೈಸೂರಲ್ಲಿ ಇರಲಿಲ್ಲ. ಆಗೆಲ್ಲಾ, ದಸರಾ ಅಂದರೆ ಮನೆಗಳಲ್ಲಿ ಆತಿಥ್ಯ ಇರೋದು. ಊರಿಗೆ ಬಂದವರಿಗೆ ಇಳಿದುಕೊಳ್ಳಲು ಸ್ವಯಂ ಪ್ರೇರಿತರಾಗಿ ಅನುವು ಮಾಡಿಕೊಡುತ್ತಿದ್ದರು. ಅಂಥಹುದೇ ಒಂದು ಮನೆಯಲ್ಲಿ ನಾನು ಅಪ್ಪ, ಇದ್ದ ನೆನಪು. ಅದು ಎಲ್ಲಿ ಅನ್ನೋದು ಗೊತ್ತಿಲ್ಲ. ಆಮೇಲೆ ಅರಮನೆಯ ಹತ್ತಿರ ಹೋದೆವು. ಭಾರಿ ಜನ. ಮಗ ಕಳೆದು ಹೋಗ್ತಾನೆ ಅಂತ ಅಪ್ಪ ನನ್ನನ್ನು ಎತ್ತಿ ಹೆಗಲ ಮೇಲೆ ಕೂಡಿಸಿಕೊಂಡರು. ನೋಡೋ, ನೋಡೋ ಮಹಾರಾಜರು ಅಂದರು. ಕಿಕ್ಕಿರಿದ ಜನ. ರಸ್ತೆ, ಬಿಲ್ಡಿಂಗ್ ಮೇಲೆ ಜನ. ಪುಟ್ಟ ಕಣ್ಣಿಗೆ ಆನೆಯಷ್ಟು ಸ್ಪಷ್ಟವಾಗಿ, ಮಹಾರಾಜರು ಕಾಣಿಸಲಿಲ್ಲ. ರಸ್ತೆಯ ಮಗ್ಗುಲಲ್ಲಿ ನಿಂತು ಮೆರವಣಿಗೆ ನೋಡಿದೆವು. ಆಮೇಲೂ ಒಂದು ದಿವಸ ಅಲ್ಲೇ ತಂಗಿದ್ದು, ಮಾರನೇ ದಿನ ಹೊರಟು ಬಂದ ನೆನಪು. ಆಮೇಲೆ ಮತ್ತೆ ದಸರಾ ನೋಡಲು ಆಗಲಿಲ್ಲ. ಪ್ರಧಾನಿ, ಮುಖ್ಯಮಂತ್ರಿ ಆದಮೇಲೆ ಹೋಗುವಂತಾಯಿತು. ಮತ್ತೆ ಹುಡುಕಿ ನೋಡುವ ಕುತೂಹಲವೇನೂ ಹುಟ್ಟಲಿಲ್ಲ. ಇಡೀ ಜೀವನದಲ್ಲಿ 2-3 ಬಾರಿ ನೋಡಿದ ದಸರಾ ಪೈಕಿ ಆವತ್ತು ಅಪ್ಪನ ಹೆಗಲ ಮೇಲೆ ಕೂತು ನೋಡಿದ ದಸರಾದ ವೈಭವ ಇದೆಯಲ್ಲ, ಅದನ್ನು ಇನ್ನು ಮರೆತಿಲ್ಲ.
-ಹೆಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ *****
ಕಿಟಕಿಯಲ್ಲೇ ಕಾಣಿಸಿತು ಆ ದೃಶ್ಯವೈಭವ..
ಸುಮಾರು 80ರ ದಶಕ ಅನಿಸುತ್ತೆ. ಆಗ ಜಗನ್ಮೋಹನ ಅರಮನೆಯಲ್ಲಿ ಕವಿಗೋಷ್ಠಿ ಏರ್ಪಾಡಾಗಿತ್ತು. ಆವಾಗೆಲ್ಲ ಹಬ್ಬ, ಆಚರಣೆ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿ ಇಲ್ಲವಾದ್ದರಿಂದ ಹೋದೆ, ಕವಿತೆ ವಾಚನಮಾಡಿ ತಕ್ಷಣ ಓಡಿ ಬಂದೆ. ಇನ್ನೊಂದು ಸಲ ಕವಿಗೋಷ್ಠಿಯ ಅಧ್ಯಕ್ಷನಾಗಬೇಕಾ ಯಿತು. ಆ ಹೊತ್ತಿಗೆ ದಸರಾದಲ್ಲಿ ಏನಿದೆ ನೋಡೋಣ ಅನ್ನೋ ಕುತೂಹಲ ಇತ್ತು. ಅದಕ್ಕಾಗಿ ಪರಿವಾರ ಸಮೇತ ಹೋಗಿದ್ದೆ. ಕವಿಗೋಷ್ಠಿ ಮುಗಿಯಿತು. ಇನ್ನೇನು ದಸರಾ ನೋಡೋಣ ಅನ್ನೋ ಹೊತ್ತಿಗೆ ಸ್ನೇಹಿತನೊಬ್ಬ ಅಪಘಾತದಲ್ಲಿ ಮರಣ ಹೊಂದಿದನೆಂಬ ವಾರ್ತೆ ಬಂತು. ದಸರಾ ನೋಡಬೇಕೆಂಬ ಆಸೆ ಕೈ ಬಿಟ್ಟು ಎಲ್ಲರನ್ನೂ ವಾಪಸ್ಸು ಕರೆದುಕೊಂಡು ಬರಬೇಕಾಯಿತು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಸರಕಾರದ ಅತಿಥಿಯಾಗಿ ದಸರಾದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಷ್ಟರಲ್ಲಿ ಗ್ರಾಮದೇವತೆಯ ಅಧ್ಯಯನದಲ್ಲಿ ತೊಡಗಿ ಕೊಂಡಿದ್ದೆ. ಅತಿಥಿಗಳಿಗೆಲ್ಲಾ ಹೋಟೆಲ್‌ನಲ್ಲಿ ರೂಂ. ಬುಕ್ ಮಾಡಿದ್ದರು. ದೊಡ್ಡ ಕಿಟಕಿಗಳು. ಆ ಮೂಲಕ ದಸರಾ ನೋಡುವವರೂ ಇದ್ದಾರೆ. ನಾನು ಕಿಟಕಿ ಪಕ್ಕದಲ್ಲಿ ಕೂತು ಇಡೀ ದಸರಾ ಮೆರವಣಿಗೆಯನ್ನು ವೀಕ್ಷಣೆ ಮಾಡಿದೆ. ದಸರಾದ ಪೂರ್ಣ ಚಿತ್ರಣ ಕಂಡದ್ದು ಅಲ್ಲೇ. ಎಲ್ಲಾ ಕಲಾ ಪ್ರಕಾರಗಳ ಪ್ರದರ್ಶನ ನೋಡಿದೆ. ಕೋಲಾಟ, ಡೊಳ್ಳು ಕುಣಿತ, ಆನೆಗಳ ಪಥಸಂಚಲನ ಎಲ್ಲವನ್ನು ನೋಡಿದ ಮೇಲೆ ಮನಸ್ಸು ಹೇಳಲು ಶುರು ಮಾಡಿತು. ಇಷ್ಟು ವರ್ಷಗಳ ಕಾಲ ದಸರಾ ನೋಡದೆ ಲುಕ್ಸಾನು ಆಯ್ತಲ್ಲಾ ಅಂತ. ನಮ್ಮಲ್ಲೇ ಇದ್ದ ವಿಭಿನ್ನ ಪ್ರಪಂಚವನ್ನು ನೋಡದೆ ಕಳೆದುಕೊಂಡು ಬಿಟ್ನಲ್ಲ ಅಂತ ಅನಿಸೋಕೆ ಶುರುವಾಯ್ತು. ಇಡೀ ದಸರಾ ಒಂಥರಾ ಕನಸಂತೆ ಕಂಡಿತು. ಯಾವುದೋ ಲೋಕದವರು ಇಲ್ಲಿ ಬಂದು ಕುಣೀತಾ ಇದ್ದಾರೆ ಅನ್ನಿಸಿತು. ಇವರೆಲ್ಲಾ ನಮ್ಮ ಭೂಮಿಗೆ ಬಂದ ವಿಶೇಷ ಅತಿಥಿಗಳು ಅನ್ನೋ ಭಾವನೆ ಬಂತು. ಸಂಸ್ಕೃತಿ ಅಧ್ಯಯನಕಾರನಾಗಿ, ವಿದ್ಯಾರ್ಥಿಯಾಗಿ ಗಮನಿಸಿದಾಗ ದಸರಾ ಅನ್ನೋದು ಇಡೀ ಸಮಾಜದ, ಸಾಂಸ್ಕೃತಿಕ ವೈವಿಧ್ಯತೆಗೆ ಹಿಡಿದ ಕನ್ನಡಿ. ಜಗತ್ತಿನ ನಾನಾ ಸಂಸ್ಕೃತಿಯ ಜನ ಇಲ್ಲಿಗೆ ಬಂದು ನಮ್ಮ ಹಬ್ಬವನ್ನು ನೋಡಿ ಅಚ್ಚರಿ ಪಡೋದನ್ನು ನೋಡಿ ಮೂಕವಿಸ್ಮಿತನಾದೆ.
-ಸಿದ್ದಲಿಂಗಯ್ಯ,ಕವಿಗಳು, *****
ದಸರಾ ನಮ್ಮೊಳಗೆ, ಅದರೊಳಗೆ ನಾವು
ನಮ್ಮೂರಲ್ಲೇ ದಸರಾ ನಡೆದರೂ ನಾನು ಅದನ್ನು ಮೊದಲು ನೋಡಿದ್ದು ಟಿ.ವಿಯಲ್ಲಿ. ನಮ್ಮನೆ ಟಿ.ವಿಯಲ್ಲಿ ಅಲ್ಲ. ಗೋಕುಲದಲ್ಲಿದ್ದ ಸಂಬಂಧಿಕರ ಮನೇಲಿ. ನಮ್ಮ ಮನೆ ಟಿ.ವಿಯಲ್ಲಿ ಡಿಡಿ 1 ಮಾತ್ರ ಪ್ರಸಾರ ಆಗ್ತಾ ಇತ್ತು. ಆಗೆಲ್ಲ ದೊಡ್ಡ ಆ್ಯಂಟೆನಾಗಳಲ್ಲಿ ಡಿಡಿ ಮೆಟ್ರೋ ಅಂತ ಬರೋದು. ಅದರಲ್ಲಿ ಮಾತ್ರ ಲೈವ್ ಟೆಲಿಕಾಸ್ಟ್ ಆಗೋದು. ಇವರಿನ್ನು ಚಿಕ್ಕ ಹುಡುಗರು. ಕರೆದುಕೊಂಡು ಹೋದರೆ ಕಳೆದು ಹೋಗ್ತಾರೆ ಅನ್ನೋ ಕಾರಣಕ್ಕೆ ಎಷ್ಟೋ ವರ್ಷ ದಸರಾಕ್ಕೆ ನಾವೆಲ್ಲ ಲೈವ್ ಆಗಿ ನೋಡಿರಲಿಲ್ಲ. ಆಮೇಲೆ ಒಂದು ಸಲ ಹೆಗಲ ಮೇಲೆ ಕೂರಿಸಿಕೊಂಡು ತೋರಿಸಿದ್ದರು. ಸಿಕ್ಕಾಪಟ್ಟೆ ಜನ. ಒಂದು ಸಲ ಹೀಗೆ ನಮ್ಮ ಮನೆ ಎದುರಿಗಿದ್ದ ಮಗು ಮತ್ತು ನಾವೆಲ್ಲ ಕುಟುಂಬ ಸಮೇತರಾಗಿ ಹೋದೆವು. ಆ ಮಗು ಚಿಕ್ಕದು ಅಂತ ಅಪ್ಪ ಎತ್ತಿಕೊಂಡಿದ್ದರು. ಎಕ್ಸಿಬಿಷನ್ ನೋಡ್ತಾ ನೋಡ್ತಾ ಅವರು ಮುಂದೆ ಹೋಗೇ ಬಿಟ್ಟರು. ನಾನು ಒಬ್ಬನೇ ಆಗೋದೆ. ಹುಡುಕಿ, ಹುಡುಕಿ ಸುಸ್ತಾಗಿ ಕೊನೆಗೆ ಎಕ್ಸಿಬಿಷನ್ ಗೇಟ್ ಹತ್ತಿರ ಬಂದು ನಿಂತು ನೋಡ್ತಾ ಇದ್ದಾಗ ಸಿಕ್ಕರು. ಸಂಜೆ 6.45ರ ಹೊತ್ತಿಗೆ ಅರಮನೆ ಮುಂದೆ ನಿಂತರೆ, 7 ಗಂಟೆಗೆ ಸರಿಯಾಗಿ ದೀಪ ಹಾಕ್ತಾರೆ. ಆಗ ಜನ ಒಂದೇ ಸಲಕ್ಕೆ “ಆಹ್’ ಅಂತ ಉದ್ಗಾರ ತೆಗೀತಾರೆ. ಅದನ್ನು ನೀವು ಕೇಳಬೇಕು. ಕೆಲವೇ ಸೆಕೆಂಡು ಮಾತ್ರ. ಜನರೆಲ್ಲರ ಒಂದೇ ಫೀಲ್‌ನ ಸೌಂಡ್ ಅದು. ಈ ಐಸ್‌ಕ್ರೀಂ ತಿಂದಾಗ, ಒಳ್ಳೆ ಊಟ ಟೇಸ್ಟ್ ಮಾಡಿದಾಗ ಆಗುತ್ತಲ್ಲ ಅಂಥದೇ ಫೀಲ್. ಆ ಸೌಂಡ್ ಕೇಳಿದಾಕ್ಷಣ ಮೈ ಜುಂ ಅನ್ನುತ್ತೆ. ಸ್ಟೇಡಿಯಂನಲ್ಲಿ ಸಿಕ್ಸ್ ಹೊಡೆದರೆ ಕಿರುಚುತ್ತಾರಲ್ಲ ಆ ಥರದ್ದಲ್ಲ ಇದು. ಇವಾಗಲೂ ಪ್ಯಾಲೇಸ್‌ಗೆ ಹೋದಾಗ ಆ ಟೈಂಗಾಗಿ ಕಾಯ್ತಿನಿ. ದಸರಾ ಬಂದಾಗೆಲ್ಲಾ, ಅಣ್ಣನ ಜೊತೆಗೆ ನೋಡಬೇಕು ಅನಿಸುತ್ತೆ. ಆದರೇನು ಮಾಡೋದು? ಜನ ಅಂಬಾರಿ ನೋಡೋದು ಬಿಟ್ಟು ಅಣ್ಣ ನನ್ನು ನೋಡೋಕೆ ಶುರುಮಾಡ್ತಾರೆ.
-ವಾಸುದೀಕ್ಷಿತ್, ಗಾಯಕ, ರಂಗಕರ್ಮಿ *****
ಆನೆ ನೋಡ್ದೆ, ಸಿನಿಮಾ ನೋಡ್ದೆ, ಹುಡ್ಗಿರ್ನ ನೋಡ್ದೆ !
ನವರಾತ್ರಿಯಲ್ಲಿ ಪುಟ್ಟ ಪುಟಾಣಿ ಮಕ್ಕಳೆಲ್ಲ ಜಡೆಹಾಕ್ಕೊಂಡು ಇರ್ತಾ ಇದ್ರು. ನನಗೆ ನಮ್ಮ ಅಪ್ಪ ಹೊಸ ಚಡ್ಡಿ, ಶರ್ಟು ಹೊಲಿಸೋರು. ಅದನ್ನು ಹಾಕ್ಕೊಂಡು ಅಕ್ಕನ ಕೈ ಹಿಡಿದುಕೊಂಡು ಮನೆ ಮನೆಗೆ ಹೋಗಿ ಬೊಂಬೆ ನೋಡೋದು. ಯಾರು ಜಾಸ್ತಿ ಬೊಂಬೆ ನೋಡ್ತಾರೋ ಅವರಿಗೆ ಜಾಸ್ತಿ ಶಕ್ತಿ ಇದೆ ಅಂತ ಅರ್ಥವಿತ್ತು ಆಗ! ಬೊಂಬೆ ಮುಂದೆ ಹಾಡು ಹೇಳ್ಳೋದು, ನಾಟಕವಾಡೋದು ಎಲ್ಲ ಮಾಡುತ್ತಾ ಇದ್ವಿ. ನಾಟಕಕ್ಕೆ ಬೇಕಾದ ಉಡುಗೆ ಅಕ್ಕಂದೋ, ತಂಗೀದೋ ಸೀರೆಗಳನ್ನು, ಅದರ ಝರಿಗಳನ್ನು ಬಿಟ್ಕೊಂಡು, ಕಾಡಿಗೆ ಹಚ್ಚಿಕೊಂಡು, ಚಾಕ್‌ಪೀಸ್ ಪುಡಿ ಮಾಡಿಕೊಂಡು ಡ್ರೆಸ್ ಮಾಡಿಕೊಳ್ತಾ ಇದ್ವಿ. ದಸರಾ ನೆಪದಲ್ಲಿ ನಾಟಕ, ಸಂಗೀತಕ್ಕೆ ಆಗಲೇ ಅಂಟಿಕೊಂಡುಬಿಟ್ಟಿದ್ವಿ. ಚರ್ಪು ಅಂತ ಪುಟಾಣಿ ಕೋಡುಬಳೆ ಕೊಡೋರು. ಚಕ್ಕುಲಿಗಳು, ಮಿಠಾಯಿಗಳು ಎಲ್ಲವನ್ನೂ ಕಲೆಕ್ಟ್ ಮಾಡಿಕೊಂಡು ವರ್ಷಕ್ಕಾಗುವಷ್ಟನ್ನೂ ಒಂದೇ ವಾರದಲ್ಲಿ ತಿಂದು ಹೊಟ್ಟೆ ಕೆಡಿಸಿಕೊಳ್ಳುತ್ತಾ ಇದ್ವಿ. ಆಗ ನಮ್ಮಮ್ಮ ಹರಳೆಣ್ಣೆ ಕುಡಿಸೋರು. ನವರಾತ್ರಿ ಅಂದ್ರೆ ಆಗೆಲ್ಲಾ ಒಂಭತ್ತು, ಹತ್ತುದಿನದ ಸಂಭ್ರಮ. ತುಂಬಾ ಚೆನ್ನಾಗಿರುತ್ತಿತ್ತು. ಅಪ್ಪ ಹಿಂದಿನ ದಿನವೇ ಹೇಳ್ಳೋರು; ಲೋ, ನಾಳೆ ದಸರಾಕ್ಕೆ ಹೋಗೋಣ ಅಂತ. ಖುಷಿ ಜ್ವರದಂತೆ ಮೈ ಎಲ್ಲಾ ಹರಡಿ ಇಡೀ ರಾತ್ರಿ ನಿದ್ದೇನೆ ಬರುತ್ತಿರಲಿಲ್ಲ. ಬೆಳಗ್ಗೆ ಎದ್ದು ಮಂಡ್ಯ ಟು ಮೈಸೂರು ಬಸ್ ಹಿಡಿದು ಹೋದರೆ ಮೈಸೂರು ತುಂಬ ಜನಸಾಗರ. ಕಳೆದು ಹೋಗ್ತಿàನಿ ಅಂತ ಅಪ್ಪ ಹೆಗಲ ಮೇಲೆ ಕೂಡ್ರಿಸಿಕೊಳ್ಳೋರು. ಜನ ಗಿಜಿಗಿಜಿ ಅನ್ನೋರು. ಅಲ್ಲೆಲ್ಲೋ ಪೀಪಿ ಊದೋರು. ಆನೆಗಳನ್ನು ಕರಕೊಂಡು ಬರುವಾಗ ಅಬ್ಟಾ ಅನಿಸೋದು. ರಾಜರ ದಿರಿಸು. ಮಹಾರಾಜರು ಆನೆ ಮೇಲೆ ಕೂತು ಬರೋದನ್ನು ನೋಡೋದೇ ಚಂದ. ಯಾರ ಮನೆಗೆ ಹೋದರೂ ನೆಂಟರು. ಆ ನೆಂಟರು ಬರುತ್ತಾರೆ ಎಂಬ ಕಾರಣಕ್ಕೆ ಮೈಸೂರು ಭಾಗದಲ್ಲಿ ದೊಡ್ಡ ಸಂಭ್ರಮ. ನಾವು ಅಗ್ರಹಾರದ ಅಪ್ಪನ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆವು. ಜಟಕಾದಲ್ಲಿ ಹತ್ಕೊಂಡು ಮೈಸೂರ್ ನೋಡ್ಕೊಂಡು ಹೋಗೋದು ಎಂಥ ಅನುಭವ ಗೊತ್ತಾ? ರತ್ನಾಕರ, ರಾಜಶೇಖರ ಕೋಟಿ ಮನೆ ಮಧ್ಯೆ ಇದೆ. ಈಗಲೂ ಪುಟ್ ಪುಟಾಣಿ ಮನೆಗಳಿವೆ. ಆ ಕಡೆ ಹೋದಾಗೆಲ್ಲ ಹಳೇ ದಸರಾ ನೆನಪು ಬರುತ್ತದೆ. ಅಪ್ಪ ಕುಸ್ತಿಗಳಿಗೆಲ್ಲಾ ಕರೆದುಕೊಂಡು ಹೊಗೋರು. ತಲೆಯಲ್ಲ ನೈಸ್ ಗುಂಡೆ ಮಾಡ್ಕೊಂಡು, ಮುಷ್ಟಿ ಹಾಕ್ಕೊಂಡು ಕುಸ್ತಿ ಆಡ್ತಾ ಇರ್ತಾರೆ. ಮುಖದಲ್ಲೆಲ್ಲಾ ರಕ್ತ ಬರ್ತಾ ಇರುತ್ತದೆ. ಅದನ್ನು ನೋಡೋಕೆ ಭಯ ಆಗೋದು. ಕುಸ್ತಿ ಶುರುವಾದರೆ ದಸರಾಕ್ಕೆ ಚಾಲೂ ಅನಿಸೋದು. ಆ ಟೈಂನಲ್ಲಿ ಸಿನಿಮಾ ರಿಲೀಸ್ ಮಾಡಿರೋರು. ಬಿಡದೆ ಅದನ್ನು ಹೋಗಿ ನೋಡೋದು. ಈಗಲೂ ನೆನಪಿದೆ “ಗಂಧದಗುಡಿ’ ಚಿತ್ರವನ್ನು ನಾನು ನೋಡಿದ್ದೇ ದಸರಾದಲ್ಲಿ. ವಯಸ್ಸಿಗೆ ಬಂದಾಗ, ದಸರಾ ಬೇರೆ ಥರ ಕಾಣಿಸೋದು. ಯೌವನದಲ್ಲಿ ನಾವು ಬರೀ ಹುಡುಗೀರ ನೋಡೋಕೆ ಹೋಗ್ತಾ ಇದ್ವಿ. ಟ್ರೈನ್‌ಮೇಲೆ ಕೂತ್ಕೊಂಡು ಹೋಗಿಬಿಡ್ತಾ ಇದ್ವಿ. ದಸರಾ ರಾಜರು, ಆನೆ ಗೀನೆ ಏನೂ ಇಲ್ಲ. ಕಣ್ತುಂಬುವಷ್ಟು ಜಗತ್ತಿನ ಸುಂದರಿಯರನ್ನು ನೋಡ್ತಾ ಇರೋದು. ದಸರಾ ಮಾಡೋದೇ ಹುಡಗೀರನ್ನು ನೋಡೋಕೆ ಅಂತನಿಸಿಬಿಡೋದು !
-ಮಂಡ್ಯರಮೇಶ್, ನಟ, ರಂಗಕರ್ಮಿ *****
ಅರಮನೆಗೆ “ಧೀ’ ಶಕ್ತಿ ಇದೆ…
ಮೈಸೂರು ದಸರಾ ಬಹಳ ಸುಂದರ ಅಂತ ಕೇಳಿದ್ದೆ. ಆದರೆ ನೋಡಿದ್ದು ಅಪ್ಪನ ಜೊತೆಯಲ್ಲಿ. ಆಗೆಲ್ಲಾ ಮೈಸೂರು ಅರಮನೆಯಲ್ಲಿ ಕಛೇರಿಗಳು ನಡೆಯುತ್ತಿದ್ದವು. ನಾನು ಅಪ್ಪನ ಜೊತೆ ಹೋಗಿದ್ದೆ. ಎಂಥ ಜನ! ಹಿಂದೂಸ್ತಾನಿ ಸಂಗೀತವನ್ನು ಇಷ್ಟು ಶಿಸ್ತುಬದ್ಧವಾಗಿ ಕೇಳ್ಳೋ ಪ್ರೇಕ್ಷಕರನ್ನು ನೋಡಿದ್ದು ಆವತ್ತೇ. ಝಗಮಗಿಸುವ ಅರಮನೆಯ ಒಳಗೆ ಸಂಗೀತ ಕೇಳ್ಳೋದು, ನುಡಿಸೋ ಪುಣ್ಯ ಇದೆಯಲ್ಲ ಇದು ಯಾರಿಗೂ ಸಿಗೋಲ್ಲ. ಈ ಅರಮನೆಗೆ “ಧೀ’ ಶಕ್ತಿ ಇದೆ ಅಂತ ಅನಿಸಿತು. ಇದಕ್ಕೂ ಮೊದಲು ಮೈಸೂರಿನ ಕಟ್ಟೆಯ ಮೇಲೆ ಕೂತು ದಸರಾ ನೋಡಿದ ನೆನಪು.
-ಪಂ. ಪ್ರವೀಣ್ ಗೋಡ್ಖಿಂಡಿ, ಬಾನ್ಸುರಿ ವಾದಕರು ನಿರೂಪಣೆ: ಕಟ್ಟೆ ಗುರುರಾಜ್