Advertisement

ಮೈಸೂರು ದಸರಾ ಉತ್ಸವ ಆಚರಣೆಯಲ್ಲೂ ಮೈತ್ರಿ ಫೈಟ್‌

06:00 AM Sep 15, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಆಚರಣೆಯಲ್ಲೂ ದೋಸ್ತಿಗಳ ಜಗಳ ಮುಂದುವರಿದಿದೆ. ದಸರಾ ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಉಪಾಧ್ಯಕ್ಷ ಸ್ಥಾನ ನೀಡದಿರುವುದರಿಂದ ಅಸಮಾಧಾನಗೊಂಡ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸಭೆ ಬಹಿಷ್ಕರಿಸಿ ಹೊರ ನಡೆದರು.

Advertisement

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಸರಾ ಕಾರ್ಯಕಾರಿ ಸಮಿತಿಯ ಮೊದಲ ಸಭೆ ನಡೆಯಿತು. ಸಚಿವ ಸಿ.ಪುಟ್ಟರಂಗಶೆಟ್ಟಿಯವರು ಸಮಿತಿಯಲ್ಲಿ ಈ ಹಿಂದಿನಂತೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕು ಎಂದರು. ಜತೆಗೆ, ದಸರಾ ಭಿತ್ತಿಚಿತ್ರದಲ್ಲಿ ತಮ್ಮ ಭಾವಚಿತ್ರ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸಮಜಾಯಿಸಿ ನೀಡಿದ ಸಚಿವ ಜಿ.ಟಿ.ದೇವೇಗೌಡ, ಹಿಂದಿನ ಸರ್ಕಾರದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್‌.ಮಹದೇವ ಪ್ರಸಾದ್‌ರನ್ನು ಉಪಾಧ್ಯಕ್ಷರನ್ನಾಗಿ ವಿಶೇಷವಾಗಿ ನೇಮಕ ಮಾಡಲಾಗಿತ್ತು. ಉಳಿದಂತೆ ಆ ಪದಟಛಿತಿ ಇಲ್ಲ ಎಂದರು. ಇದಕ್ಕೆ ಒಪ್ಪದ ಸಚಿವ ಸಿ.ಪುಟ್ಟರಂಗಶೆಟ್ಟಿ ಸಭೆ ಬಹಿಷ್ಕರಿಸಿ ಹೊರ ನಡೆದರು. ಬಳಿಕ, ಸಭೆಯಲ್ಲಿ ಚರ್ಚಿಸಿ ಸಚಿವರಾದ ಸಾ.ರಾ.ಮಹೇಶ್‌, ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್‌.ಮಹೇಶ್‌ ಅವರನ್ನು ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಿಸಲು ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರಕ್ಕೆ 25 ಕೋಟಿ ರೂ. ಪ್ರಸ್ತಾವನೆ
ಮೈಸೂರು:
ಮೈಸೂರು ದಸರಾ ಮಹೋತ್ಸವ-2018ಕ್ಕೆ 25 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ದಸರಾ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಅಲ್ಲದೆ, ಮೂರು ಪಕ್ಷಗಳ ತಲಾ ಐವರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿ ಸುಮಾರು 25 ಜನರನ್ನೊಳಗೊಂಡ 16 ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಂಬಂಧ ಸೆ.20ರೊಳಗೆ ಉಪ ಸಮಿತಿಗೆ ಹೆಸರುಗಳನ್ನು ಸೂಚಿಸುವಂತೆ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆಯಲಾಗುವುದು. ಸೆ.25ರಂದು ಉಪ ಸಮಿತಿ ರಚಿಸಲಾಗುವುದು ಎಂದು ಸಭೆ ಬಳಿಕ ಸಚಿವರು ತಿಳಿಸಿದರು.

ಗಜಪಡೆಯ 2ನೇ ತಂಡ ಆಗಮನ
ಮೈಸೂರು:
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಎರಡನೇ ತಂಡದಲ್ಲಿ ಕರೆತರಲಾದ ಆರು ಆನೆಗಳು ಶುಕ್ರವಾರ ಮೈಸೂರು ಅರಮನೆ ಪ್ರವೇಶಿಸಿದವು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ 60 ವರ್ಷ ವಯಸ್ಸಿನ ಬಲರಾಮ, 52 ವರ್ಷ ವಯಸ್ಸಿನ ಅಭಿಮನ್ಯು, 37 ವರ್ಷ ವಯಸ್ಸಿನ ದ್ರೋಣ, ಕೊಡಗಿನ ದುಬಾರೆ ಆನೆ ಶಿಬಿರದಿಂದ 40 ವರ್ಷ ವಯಸ್ಸಿನ ಕಾವೇರಿ, 61 ವರ್ಷ ವಯಸ್ಸಿನ ವಿಜಯ ಹಾಗೂ 62 ವರ್ಷ ವಯಸ್ಸಿನ ಪ್ರಶಾಂತ ಆನೆಗಳನ್ನು ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಕರೆ ತರಲಾಯಿತು. ಬಳಿಕ, ಆನೆಗಳ ಪಾದ ತೊಳೆದು, ಅರಿಶಿನ, ಕುಂಕುಮ, ಗಂಧ,ಭಸ್ಮ ಹಚ್ಚಿ, ಪುಷ್ಪಗಳಿಂದ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಲಾಯಿತು.ಬೆಲ್ಲ, ಕಬ್ಬು ತಿನ್ನಿಸಿ, ಪೂರ್ಣಕುಂಭ ಸ್ವಾಗತ ಕೋರಲಾಯಿತು.

Advertisement

ಎರಡನೇ ಹಂತದ ತಾಲೀಮು ಆರಂಭ: ಈ ಮಧ್ಯೆ, ಮೊದಲ ತಂಡದಲ್ಲಿ ಆಗಮಿಸಿ, ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗೆ ಗಣೇಶ ಚತುರ್ಥಿ ಪ್ರಯುಕ್ತ ಗುರುವಾರ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಜತೆಗೆ, ಅಂಬಾರಿ ಹೊರುವ ಅರ್ಜುನನಿಗೆ ಭಾರ ಹೊರಿಸಿ ತಾಲೀಮು ನಡೆಸುವ ಮೂಲಕ ಎರಡನೇ ಹಂತದ ತಾಲೀಮಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಮೊದಲ ದಿನದಂದು 300 ಕೆ.ಜಿ.ತೂಕದ ಮರಳು ಮೂಟೆ ಹೊರಿಸಿ, ತಾಲೀಮು ನಡೆಸಲಾಯಿತು.

ಸಚಿವ ಜಿ.ಟಿ.ದೇವೇಗೌಡರನ್ನು ಬಿಟ್ಟರೆ ನಾನೇ ಸೀನಿಯರ್‌. ಶಿಷ್ಟಾಚಾರದ ಪ್ರಕಾರ ನನ್ನನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಬೇಕು. ದಸರಾ ಪೋಸ್ಟರ್‌ನಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಜಯಮಾಲ ಅವರ ಫೋಟೋಗಳಿವೆ. ನನ್ನ ಫೋಟೋ ಹಾಕಿಲ್ಲ. ಹೀಗಿರುವಾಗ ನಾನೇಕೆ ಸಭೆಯಲ್ಲಿರಬೇಕು? ಅದಕ್ಕೆ ಸಭೆಯಿಂದ ಹೊರ ಬಂದೆ.
– ಪುಟ್ಟರಂಗಶೆಟ್ಟಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next