ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಗಜಪಡೆಗಳಿಗೆ ಎರಡನೇ ಹಂತದ ತೂಕ ಪರೀಕ್ಷೆ ನಡೆಸಲಾಯಿತು.
ಬರೋಬ್ಬರಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್ ಅರ್ಜುನ ಈ ಬಾರಿಯೂ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಒಟ್ಟು 14 ಆನೆಗಳು ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಇಂದು ನಡೆದ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಕೆಲವೊಂದು ಆನೆಗಳಿಗೆ ಇದು ಮೊದಲ ಹಂತದ ತೂಕ ಪರೀಕ್ಷೆಯೂ ಆಗಿತ್ತು.
ಇಂದು ನಡೆಸಿದ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 140 ಕೆಜಿ ತೂಕ ಹೆಚ್ಚಿಸಿಕೊಂಡಿದೆ, ಇದರ ಜೊತೆ ಭೀಮ ಈ ಬಾರಿ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದೆ, ಅದರಂತೆ ಮಹೇಂದ್ರ 135 ಕೆಜಿ, ಧನಂಜಯ 50 , ಗೋಪಿ 65, ಕಂಜನ್ 155, ವಿಜಯ 55, ವರಲಕ್ಷ್ಮಿ 150 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದೆ.
ಮೊದಲ ಹಂತದ ತೂಕ ಮಾಪನದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ 5680 ಕೆಜಿ ತೂಗಿದ್ದು, ಸುಗ್ರೀವ 5035 ಕೆಜಿ ತೂಗಿದ್ದಾನೆ. ಇದರ ಜೊತೆ ಪ್ರಶಾಂತ 4970 , ರೋಹಿಣಿ 3350, ಹಿರಣ್ಯ 2915 , ಲಕ್ಷ್ಮಿ 3235 ಕೆಜಿ ತೂಗಿದ್ದಾರೆ.
ಇದನ್ನೂ ಓದಿ: World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ