Advertisement

ದಸರಾ ಗಜಪಯಣಕ್ಕೆ ಚಾಲನೆ

01:08 AM Aug 23, 2019 | Sriram |

ವೀರನಹೊಸಹಳ್ಳಿ (ಹುಣಸೂರು): ಮೈಸೂರು ದಸರಾದ ವಿಜಯದಶಮಿಯ ಜಂಬೂಸವಾರಿ ಮೆರವಣಿ ಗೆಯಲ್ಲಿ ಪಾಲ್ಗೊಳ್ಳುವ ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳ ಮೊದಲ ತಂಡಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಗುರುವಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿಗೆ ಕಳುಹಿಸಿಕೊಡಲಾಯಿತು.

Advertisement

ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ಬಳ್ಳೆ ಆನೆ ಶಿಬಿರದ ಅರ್ಜುನ, ದುಬಾರೆ ಆನೆ ಶಿಬಿರದ ವಿಜಯ, ಧನಂಜಯ, ಈಶ್ವರ ಹಾಗೂ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಆನೆಗಳನ್ನು ಬುಧವಾರವೇ ಪೂಜೆ ಸಲ್ಲಿಸಿ, ನಾಗರಹೊಳೆಗೆ ಕರೆತರಲಾಗಿತ್ತು. ಗುರುವಾರ ಬೆಳಗ್ಗೆ ಆನೆಗಳ ಮಾವುತರು, ಕವಾಡಿಗಳು ನಾಗರಹೊಳೆ ಅರಣ್ಯದ ಮೂರ್ಕಲ್ ಕೆರೆಯಲ್ಲಿ ಆನೆಗಳ ಮೈತೊಳೆದು ಶುಚಿಗೊಳಿಸಿ, ಅಲಂಕರಿಸಿದರು. ತಾವೂ ಸ್ನಾನ ಮಾಡಿ, ಪೋಷಾಕು ಧರಿಸಿ, ಮೂರ್ಕಲ್ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವೀರನಹೊಸಹಳ್ಳಿಯ ಹೆಬ್ಟಾಗಿಲಿಗೆ ಆನೆಗಳನ್ನು ಕರೆ ತಂದು ಸಾಲಾಗಿ ನಿಲ್ಲಿಸಿದರು.

ಆನೆಗಳಿಗೆ ಪೂಜೆ: ಬೆಳಗ್ಗೆ 11 ಗಂಟೆ ವೇಳೆಗೆ ಅರಮನೆ ಪುರೋಹಿತ ಪ್ರಹ್ಲಾದರಾವ್‌ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಆನೆಗಳಿಗೆ ಬೆಲ್ಲ, ಕಬ್ಬು, ತೆಂಗಿನಕಾಯಿ ಸೇರಿ ನೈವೇದ್ಯ ತಿನ್ನಿಸಿ, ಗಣಪತಿ, ವನದೇವತೆ ಮತ್ತು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸ ಲಾಯಿತು. 11.20ಕ್ಕೆ ಆಗಮಿಸಿದ ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಮೇಯರ್‌ ಪುಷ್ಪಲತಾ ಜಗನ್ನಾಥ್‌ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪುಷ್ಪವೃಷ್ಟಿಗೈದು, ಗಜಪಯಣಕ್ಕೆ ಚಾಲನೆ ನೀಡಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲಿನಿಂದ ಹೊರಟ ಗಜಪಡೆಗೆ ಸುಮಂಗಲಿಯರು ಪೂರ್ಣಕುಂಭ ಸ್ವಾಗತ ಕೋರಿದರು. ಮಂಗಳವಾದ್ಯ, ಕಂಸಾಳೆ ಮೊದಲಾದ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಅಲ್ಲಿಂದ ಮತ್ತೆ ನಾಗರಹೊಳೆ ಅರಣ್ಯದೊಳಕ್ಕೆ ಆನೆಗಳನ್ನು ಕರೆದೊಯ್ದು, ಲಾರಿಗಳಿಗೆ ಹತ್ತಿಸಿ, ಮೈಸೂರಿಗೆ ಕರೆ ತರಲಾಯಿತು. ಅ.26ರವರೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಗಜಪಡೆ ಬೀಡು ಬಿಡಲಿದ್ದು, 26ರಂದು ಸಾಂಪ್ರದಾಯಿಕ ಪೂಜೆಯೊಂದಿಗೆ ಗಜಪಡೆ ವಿಧ್ಯುಕ್ತವಾಗಿ ಅರಮನೆ ಪ್ರವೇಶಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next