Advertisement

ಅರಮನೆಯಲ್ಲಿ ಸರಸ್ವತಿ ಪೂಜೆ, ಕಾಳರಾತ್ರಿ ಉತ್ಸವ

03:28 PM Oct 13, 2021 | Team Udayavani |

ಮೈಸೂರು: ಮೈಸೂರು ಅರಮನೆಯಲ್ಲಿ ನವರಾತ್ರಿ ಅಂಗವಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಂಗಳವಾರ ಸರಸ್ವತಿ ಪೂಜೆ ನೆರವೇರಿಸಿದರು. ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಪೂಜೆ ನೆರವೇರಿಸಲಾಯಿತು. ಸರಸ್ವತಿ ಪೂಜೆ ಆರಂಭಕ್ಕೂ ಮುನ್ನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಕನ್ನಡಿ ತೊಟ್ಟಿಗೆ ಆಗಮಿಸಿ ನಮಸ್ಕರಿಸಿದರು. ಬಳಿಕ ರಾಜಪುರೋಹಿತರೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಗಣಪತಿ ಪೂಜೆ, ಚಾಮುಂಡೇಶ್ವರಿ ಪೂಜೆ ನೆರವೇರಿಸಿದರು.

Advertisement

ನಂತರ ಕನ್ನಡಿ ತೊಟ್ಟಿಯಲ್ಲಿ ಪೂಜೆ ಇಡಲಾಗಿದ್ದ, ವೀಣೆ, ತಬಲ, ತಾಳೆಗರಿಗಳು, ವಿವಿಧ ಗ್ರಂಥಗಳಿಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಸರಸ್ವತಿ ಫೋಟೋಗೆ ಪುಷ್ಪಾರ್ಚನೆ ಮಾಡಿ, ಮಂಗಳಾರತಿ ಬೆಳಗಿದರು. ಸರಸ್ವತಿ ಪೂಜೆ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಿಂದ ಪ್ರಧಾನ ಆಗಮಿಕ ಡಾ.ಎನ್‌.ಶಶಿಶೇಖರ್‌ ದೀಕ್ಷಿತ್‌ ಅವರು ಪ್ರಸಾದ ತಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ನೀಡಿದರು.

ಇದನ್ನೂ ಓದಿ;- ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ

 ಕಾಳರಾತ್ರಿ ಉತ್ಸವ: ಸಂಜೆ ಅರಮನೆಯಲ್ಲಿ ಕಾಳರಾತ್ರಿ ಉತ್ಸವ ನೆರವೇರಿತು. ಎಮ್ಮೆಯ ಗೊಂಬೆಯನ್ನು ಮಾಡಿ, ಅದರ ತಲೆ ಭಾಗಕ್ಕೆ ಪಟಾಕಿ ಇಟ್ಟು ಸಿಡಿಸಲಾಯಿತು. ಇದರಿಂದ ಎಮ್ಮೆಯ ತಲೆ ಭಾಗ ಬೇರ್ಪಟ್ಟಾಗ ಕುಂಕುಮದ ನೀರನ್ನು ಸುರಿದು ಚಾಮುಂಡೇಶ್ವರಿ ದೇವಿಯ ಫೋಟೋ ಇಟ್ಟು, ಮಹಿಷ ಮರ್ಧಿನಿ ಸ್ವರೂಪದಲ್ಲಿ ಪೂಜೆ ಸಲ್ಲಿಸಲಾಯಿತು. ಅಂತಿಮ ತಾಲೀಮು: ಜಂಬೂ ಸವಾರಿ ಮೆರವಣಿಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಅಂತಿಮ ಹಂತದ ತಾಲೀಮು ನಡೆಸಲಾಗಿದೆ. ಜತೆಗೆ ಅಶ್ವರೋಹಿದಳ, ಪೊಲೀಸ್‌ ಬ್ಯಾಂಡ್‌ಗಳಿಂದಲೂ ಅಂತಿಮ ಹಂತದ ರಿಹರ್ಸ್‌ಲ್‌ ನಡೆಯುತ್ತಿದೆ

ಅರಮನೆಯಲ್ಲಿ ಆಯುಧಪೂಜೆ, ವಿಜಯದಶಮಿ ಸಿದ್ಧತೆ-

Advertisement

ಮೈಸೂರು: ಅರಮನೆಯಲ್ಲಿ ಅ.14ರಂದು ನಡೆಯುವ ಆಯುಧ ಪೂಜೆ ಹಾಗೂ ಅ.15ರಂದು ಜರುಗುವ ವಿಜಯದಶಮಿ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಆಯುಧಪೂಜೆಯಂದು ಅರಮನೆಯಲ್ಲಿ ಮೊದಲಿಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಯೊಂದಿಗೆ ಹೋಗಿ ಪಟ್ಟದ ಕತ್ತಿ ಹಾಗೂ ಇನ್ನಿತರ ಕೆಲವು ಆಯುಧಗಳನ್ನು ತೊಳೆದು ವಿಶೇಷವಾಗಿ ಪೂಜಿಸುವುದು ಸಂಪ್ರದಾಯ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪೂಜೆ ನೆರವೇರಿಸಲಿದ್ದಾರೆ.

ಮೊದಲಿಗೆ ಆತ್ಮ ವಿಲಾಸ ಗಣಪತಿಗೆ ಪೂಜೆ ಸಲ್ಲಿಸುವ ಯದುವೀರ್‌ ಬಳಿಕ, ಸವಾರಿ ತೊಟ್ಟಿಗೆ ಆಗಮಿಸಲಿದ್ದಾರೆ. ಇಲ್ಲಿ ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗುವುದು. ಈ ಸ್ಥಳದಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಕತ್ತಿ, ಬೆಳ್ಳಿ ಪಲ್ಲಕ್ಕಿ, ಚಿನ್ನದ ಪಲ್ಲಕ್ಕಿ, ಪಟ್ಟದ ಛತ್ರಿಗೆ ವಿಶೇಷ ಪೂಜೆ ನಡೆಯಲಿದೆ. ಇದಲ್ಲದೆ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಇರಿಸಲಾಗಿರುವ ಶಂಕಾಯುಧ, ವಜ್ರಾಯುಧ, ಗದಾಯುಧಗಳನ್ನು ಪೂಜೆಗೆ ಇರಿಸಲಾಗುತ್ತದೆ.

ಅರಮನೆಯಲ್ಲಿ ಆಯುಧ ಪೂಜೆ: ಅ.14ರಂದು ಬೆ.8.20ರಿಂದ 8.40ಕ್ಕೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆಯುಧ ಪೂಜೆ ನಡೆಯಲಿದೆ. ಬಳಿಕ ಅವುಗಳನ್ನು ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಣ ಮಂಟಪಕ್ಕೆ ತರಲಾಗುವುದು. ಬೆ. 8.45ಕ್ಕೆ ಅರಮನೆಯ ಚಂಡಿ ಹೋಮ ಕೊಠಡಿಯಲ್ಲಿ ಪೂರ್ಣಾಹುತಿ ನಡೆಯಲಿದೆ. ಬೆ.11.30 ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಕರೆತರಲಾಗುವುದು. ಬೆ.12.15ಕ್ಕೆ ಆಯುಧ ಪೂಜೆ ಆರಂಭವಾಗಲಿದೆ. ಸಂ.7ಕ್ಕೆ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಖಾಸಗಿ ದರ್ಬಾರ್‌ ಹಾಗೂ ಸಿಂಹ ವಿಸರ್ಜನೆ ನಡೆಯಲಿದೆ. ಬಳಿಕ ಹುಜೂರ್‌ ದೇವರ ಮನೆಯಲ್ಲಿ ಕನಕ ವಿಸರ್ಜನೆ ನಡೆಯಲಿದೆ. ಬಳಿಕ ಅಮಲ ದೇವತಾ ಸನ್ನಿಧಿ ತಲುಪಿ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.

 ವಿಜಯದಶಮಿ ಆಚರಣೆ: ಅ.14ರಂದು ಬೆ.11ಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಯನ್ನು ಆನೆ ಬಾಗಿಲಿನ ಬಳಿಗೆ ಕರೆತರಲಾಗುವುದು. ಮ.12.10ಕ್ಕೆ ಉತ್ತರ ಪೂಜೆ ನಂತರ ಆಯುಧ ಗಳನ್ನು ಕಳುಹಿಸಿಕೊಡಲಾಗುವುದು. ನಂತರ ವಿಜಯಯಾತ್ರೆ, ಶಮಿಪೂಜೆ ನಡೆಯಲಿದೆ. ಬಳಿಕ ನಾಡ ದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ತರಲಾಗುತ್ತದೆ. ಅ.15ರಂದು ಸಿಂಹಾಸನದ ಭಾಗಗಳನ್ನು ವಿಂಗಡಿಸಿ ಸಿಂಹಾಸನದ ಕೊಠಡಿಗೆ ಸಾಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next