Advertisement

ಮೈಸೂರು: ಹತೋಟಿಯಲ್ಲಿ ಚರ್ಮಗಂಟು ರೋಗ

05:29 PM Nov 04, 2022 | Team Udayavani |

ಮೈಸೂರು: ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದ್ದ ಚರ್ಮಗಂಟು ರೋಗ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಪಶುಸಂಗೋಪನೆ ಇಲಾಖೆಯಿಂದ ಸಮರೋಪಾದಿಯಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ.

Advertisement

ಈಗಾಲೇ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉಲ್ಬಣಗೊಂಡಿರುವ ಚರ್ಮಗಂಟು ಕಾಯಿಲೆ ಮೈಸೂರಿನಲ್ಲಿ ಸ್ವಲ್ಪಮಟ್ಟಿಗೆ ತಗ್ಗಿದೆ. ಎರಡು ತಿಂಗಳ ಹಿಂದೆ ಕೆ.ಆರ್‌. ನಗರ ತಾಲೂಕಿನ ಭೇರ್ಯ ವ್ಯಾಪ್ತಿಯಲ್ಲಿ ಕಾಣಿಸಿ ಕೊಂಡಿದ್ದ ಕಾಯಿಲೆ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಗೂ ವ್ಯಾಪಿಸಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಈ ವೇಳೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತೆಗೆದುಕೊಂಡ ಮುಂಜಾಗ್ರತಾ ಕ್ರಮ ಮತ್ತು ಲಸಿಕೆ ಹಾಕುವ ಕಾರ್ಯದಿಂದ ಸದ್ಯಕ್ಕೆ ತಹಬದಿಗೆ
ಬಂದಿದ್ದು, 96 ಹಸುಗಳಲ್ಲಿ ಸೋಂಕು ಹರಡಿರುವುದು ಪತ್ತೆಯಾಗಿದೆ.

ಎಂಟು ಹಸುಗಳ ಸಾವು: ಚರ್ಮಗಂಟು ರೋಗದಿಂದ ಜಿಲ್ಲೆಯಲ್ಲಿ ಈವರೆಗೆ ಜಿಲ್ಲೆಯಲ್ಲಿ 8 ರಾಸುಗಳು ಮೃತಪಟ್ಟಿವೆ. ಕೆ.ಆರ್‌.ನಗರ ತಾಲೂಕಿನಲ್ಲಿ 01, ತಿ.ನರಸೀಪುರ ತಾಲೂಕಿನಲ್ಲಿ 3, ಸರಗೂರು ತಾಲೂಕಿನಲ್ಲಿ 4 ಹಸುಗಳು ಮೃತಪಟ್ಟಿವೆ. ಸಾವಿಗೀಡಾದ ರಾಸುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಧನ ನೀಡಲಾಗುತ್ತಿದ್ದು, ಹಸುವಿಗೆ 20 ಸಾವಿರ, ಉಳುಮೆ ಮಾಡುವ ಎತ್ತಿಗೆ 30 ಹಾಗೂ ಕರುಗಳಿಗೆ 5 ಸಾವಿರ ಪರಿಹಾರ ಧನ ನಿಗದಿ ಮಾಡಲಾಗಿದೆ.

5.14 ಲಕ್ಷ ಜಾನುವಾರು: ಜಿಲ್ಲೆಯಲ್ಲಿ ದನ, ಎಮ್ಮೆ ಹಾಗೂ ಎತ್ತುಗಳು ಸೇರಿದಂತೆ 5 ಲಕ್ಷದ 14 ಸಾವಿರ ಜಾನುವಾರುಗಳಿದ್ದು, ಈವರಗೆ 80 ಸಾವಿರ ಲಸಿಕೆ ನೀಡಲಾಗಿದೆ. ರೋಗ ಕಾಣಿಸಿಕೊಂಡ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳಲ್ಲಿ 50 ಸಾವಿರ ಲಸಿಕೆ ಪೂರೈಕೆಯಾಗಲಿದ್ದು, ಒಟ್ಟು 1.3 ಲಕ್ಷ ಲಸಿಕೆ ನೀಡಲು ಇಲಾಖೆ ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ದನಗಳ ಜಾತ್ರೆ, ಜಾನುವಾರು ಸಂತೆಯ ಮೇಲೆ ನಿಷೇಧ ಹೇರಿರುವುದು, ರೋಗ ಹರಡುವುದನ್ನು ನಿಯಂತ್ರಿಸುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದ್ದು ಹಾಗೂ ಸೋಂಕು ಕಾಣಿಸಿಕೊಂಡ ಪ್ರದೇಶದ ಸುತ್ತಲಿನ ಹಳ್ಳಿಯ ಜಾನುವಾರುಗಳಿಗೆ ತುರ್ತಾಗಿ ಲಸಿಕೆ ನೀಡಿದ್ದರಿಂದ ರೋಗ ಹತೋಟಿಯಲ್ಲಿದೆ ಎಂದು ಉದಯವಾಣಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ತಾಲೂಕುವಾರು ರೋಗದ ಮಾಹಿತಿ
ಸದ್ಯಕ್ಕೆ ಜಿಲ್ಲೆಯಲ್ಲಿ 96 ಜಾನುವಾರುಗಳಿಗೆ ರೋಗ ಹರಡಿದ್ದು, ನೂರಕ್ಕೂ ಹೆಚ್ಚು ದನಗಳು ರೋಗದಿಂದ ಗುಣಮುಖವಾಗಿವೆ. ಕೆ.ಆರ್‌.ನಗರ -15, ಮೈಸೂರು ತಾಲೂಕು -14, ನಂಜನಗೂಡು – 12, ಪಿರಿಯಾಪಟ್ಟಣ – 8, ತಿ. ನರಸೀಪುರ 35, ಸರಗೂರು -12 ಪ್ರಕರಣಗಳು ವರದಿಯಾಗಿದೆ. ಹುಣಸೂರು ಮತ್ತು ಎಚ್‌.ಡಿ. ಕೋಟೆಯಲ್ಲಿ ಈವರೆಗೆ ಯಾವ ರಾಸುಗಳಿಗೆ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಮಗಂಟು ರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಸು, ಎಮ್ಮೆ ಮತ್ತು ಎತ್ತುಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕಚ್ಚುವ ನೊಣ, ಉಣ್ಣೆ, ಸೊಳ್ಳೆಯ ಕಡಿತದಿಂದ ಈ ಕಾಯಿಲೆ ಒಂದು ರಾಸುವಿನಿಂದ ಮತ್ತೂಂದು ರಾಸುವಿಗೆ ಹರಡಲಿದ್ದು, ರೈತರು ಎಚ್ಚರಿಕೆ ವಹಿಸಬೇಕು.
ರಾಸುಗಳಲ್ಲಿ ರೋಗ ಲಕ್ಷಣ ಕಂಡುಬಂದರೆ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಬೇಕು.
● ಡಾ. ಷಡಕ್ಷರಮೂರ್ತಿ,
ಉಪನಿರ್ದೇಶಕರು ಪಶುಸಂಗೋಪನೆ
ಇಲಾಖೆ ಮೈಸೂರು

ಜಾಗೃತರಾದ ಜಿಲ್ಲೆಯ ರೈತರು
ರೋಗ ಹರಡುತ್ತಿರುವ ಸಂಬಂಧ ಜಾಗೃತರಾಗಿರುವ ರೈತರು ತಾವು ವಾಸಿಸುವ ಪ್ರದೇಶ ಹಾಗೂ ಕೊಟ್ಟಿಗೆ ಸಮೀಪ ನೀರು ನಿಲ್ಲದಂತೆ, ಸೊಳ್ಳೆ, ನೊಣ ಬಾರದಂತೆ ಎಚ್ಚರಿಕೆ ವಹಿಸಿದ್ದು, ಅದಕ್ಕಾಗಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಜತೆಗೆ ದನ ಮತ್ತು ಎಮ್ಮೆಗಳಿಗೂ
ನೈಲಾನ್‌ ಸೊಳ್ಳೆ ಪರದೆ ಕಟ್ಟಿ ಎಚ್ಚರಿಕೆ ವಹಿಸಲಾಗುತ್ತಿರುವುದು ವಿಶೇಷ.

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next