Advertisement

ಗದ್ದಲದ ನಡುವೆ ಗ್ಯಾಸ್‌ಪೈಪ್‌ಲೈನ್‌ಗೆ ಒಪ್ಪಿಗೆ

02:45 PM Apr 30, 2022 | Team Udayavani |

ಮೈಸೂರು: ಮೈಸೂರಿನ ಮಹತ್ವಾಕಾಂಕ್ಷೆ ಯೋಜನೆ ಯಾದ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಗೆ ಗೊಂದಲ ಮತ್ತು ವಿಪಕ್ಷಗಳ ವಿರೋಧದ ನಡುವೆಯೂ ಮೇಯರ್‌ ಸುನಂದಾ ಫಾಲನೇತ್ರ ಒಪ್ಪಿಗೆ ಸೂಚಿಸಿದರು.

Advertisement

ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ವಿಪಕ್ಷಗಳ ನಾಯಕರು ಉಂಟು ಮಾಡಿದ ಗೊಂದಲ ಹಾಗೂ ವಿರೋಧದ ನಡುವೆ ಗ್ಯಾಸ್‌ಪೈಪ್‌ಲೈನ್‌ ಅಳವಡಿಕೆಗೆ ಅನುಮೋದನೆ ನೀಡಿ, ಸಭೆಯನ್ನು ಮುಕ್ತಾಯಗೊಳಿಸಿದರು.

ಚರ್ಚೆಗೂ ಆಸ್ಪದ ನೀಡದೆ ಅನುಮೋದನೆ: ಕೌನ್ಸಿಲ್‌ ಸಭೆಯ ವಿಷಯ ಸೂಚಿಯಲ್ಲಿ 10ನೇ ವಿಷಯವಾಗಿದ್ದ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯ ವಿಚಾರವನ್ನು ಎರಡನೇ ವಿಷಯವಾಗಿ ತೆಗೆದುಕೊಂಡ ಮೇಯರ್‌ ಅವರು, ಸಭೆಯಲ್ಲಿ ಯಾವುದೇ ಚರ್ಚೆಗೂ ಆಸ್ಪದ ನೀಡದೆ ಅನುಮೋದನೆಯನ್ನು ಕೊಟ್ಟರು. ಇದರಿಂದಾಗಿ ಕೌನ್ಸಿಲ್‌ ಸಭೆಯ ಸಿಂಧುತ್ವ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸುತ್ತಿದ್ದ ವಿಪಕ್ಷ ಸದಸ್ಯರು ಒಂದು ಕ್ಷಣ ಅವಕ್ಕಾಗಿದ್ದಲ್ಲದೇ ಕೆರಳಿದರು. ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಸಭೆ ಕೊರಂ ಅಭಾವದಿಂದ 3.30ಕ್ಕೆ ಆರಂಭ ವಾಯಿತು. ಈ ವೇಳೆ ಎದ್ದುನಿಂತ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಮೇಯರ್‌ ಅವಧಿ ಮುಗಿದರೂ ಕೌನ್ಸಿಲ್‌ ಸಭೆ ನಡೆಸುವ ಅಧಿಕಾರ ಇದೆಯೇ, ಕೌನ್ಸಿಲ್‌ ಸಭೆಯ ಸಿಂಧುತ್ವದ ಬಗ್ಗೆ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಈ ನಡುವೆ ಆಗಾಗ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಕಾಯಿದೆ ಅನ್ವಯ ಮೇಯರ್‌ ಅವಧಿ ಮುಗಿದರೂ ಮುಂದಿನ ಚುನಾವಣೆ ಘೋಷಣೆಯಾಗುವವರೆಗೂ ಅವರೆ ಮೇಯರ್‌ ಆಗಿ ಮುಂದುವರೆಯುತ್ತಾರೆ. ಜೊತೆಗೆ ಈ ಹಿಂದೆ ಇದ್ದ ಅಧಿಕಾರ ಇರಲಿದೆ. ಜೊತೆಗೆ ಎಲ್ಲಾ ಸ್ಥಾಯಿ ಸಮತಿ ಅಧ್ಯಕ್ಷರೂ ಮುಂದುವರೆದೂ ಅವರಿಗೆ ಸಭೆ ನಡೆಸುವ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಕೆರಳಿದ ಕಾಂಗ್ರೆಸ್‌ನ ಹಿರಿಯ ಸದಸ್ಯರಾದ ಆಯೂಬ್‌ ಖಾನ್‌, ಪುಷ್ಪಲತಾ ಜಗನ್ನಾಥ್‌, ಶ್ರೀಧರ್‌, ಶೋಭಾ ಸುನೀಲ್‌ ಮತ್ತಿತರರು ನಮ್ಮ ಸದಸ್ಯರು ಮೊದಲ ಅವಧಿಯಲ್ಲಿ ಮೇಯರ್‌ ಆಗಿದ್ದಾರ ಮೂರು ತಿಂಗಳು ಹಂಗಾಮಿ ಎಂದು ಯಾವುದೇ ಅಧಿಕಾರ ನಿಡದೇ, ಸಭೆ ಮಾಡದಂತೆ ಹೇಳಲಾಗಿತ್ತು. ಆದರೀಗ ಮೇಯರ್‌ ಚುನಾವಣೆವರೆಗೂ ಹಿಂದಿನ ಮೇಯರ್‌ ಮುಂದುವರೆಯಬಹುದು ಎಂದು ಹೇಳುತ್ತಿರುವುದು ದ್ವಂದ್ವ ನೀತಿ ಎಂದು ಕಿಡಿಕಾರಿದರು.

Advertisement

ಮೇಯರ್‌ ಕೌನ್ಸಿಲ್‌ ಸಭೆ ನಡೆಸಲು ಅವಕಾಶವಿದೆ: ಈ ವೇಳೆ ಮಧ್ಯ ಪ್ರವೇಶ ಮಾಡಿದ ಆಡಳಿತ ಪಕ್ಷದ ನಾಯಕ ಶಿವಕುಮಾರ್‌, ಕಾಯಿದೆಯಲ್ಲಿ ಮೇಯರ್‌ ಕೌನ್ಸಿಲ್‌ ಸಭೆ ನಡೆಸಲು ಅವಕಾಶವಿದೆ ಎಂದು ಹೇಳಿರುವಾಗ ಈ ಬಗ್ಗೆ ಚರ್ಚೆ ಅನಗತ್ಯ. ದಯಮಾಡಿ ಸಭೆ ನಡೆಸಲು ಅವಕಾಶ ಮಾಡಿಕೊಡಿ ಎಂದು ವಿಪಕ್ಷಗಳಲ್ಲಿ ಮನವಿ ಮಾಡಿದರು.

ಈ ವೇಳೆ ಜೆಡಿಎಸ್‌ ಸದಸ್ಯರು ಧ್ವನಿಗೂಡಿಸಿದ್ದರಿಂದ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಧ್ಯ ಪ್ರವೇಶಿಸಿ ಪಾಲಿಕೆ ಇತಿಹಾಸದಲ್ಲಿ ಇಂತಹ ಬೆಳವಣಿಗೆ ನಡೆದಿರಲಿಲ್ಲ. ಈಗ ಸಭೆ ನಡೆಸಲು ತಾಂತ್ರಿಕ ಸಮಸ್ಯೆ ಇದೆ. ಒಂದು ವೇಳೆ ಸಭೆ ನಡೆದರೆ ಮುಂದೆ ಹೊದ ಗೊಂದಲಗಳಿಗೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದರು.

ಆದೇಶ ಪ್ರತಿ ನೀಡಿ: ಜತೆಗೆ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ ಮಾತನಾಡಿ, ಮೇಯರ್‌ ಅವಧಿ ಪೂರ್ಣಗೊಂಡಿದ್ದರೂ ಕೌನ್ಸಿಲ್‌ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೆ ಆದೇಶ ಪ್ರತಿ ನೀಡಿ. ಇಲ್ಲವಾದರೆ ಇದೆ ಗೊಂದಲ ಮುಂದುವರೆಯಲಿದೆ. ನಿಮಗೆ ಸಭೆ ನಡೆಸಲು ಅಧಿಕಾರವಿದ್ದರೆ ಸ್ಥಾಯಿ ಸಮಿತಿ ಸದಸ್ಯರಿಗೂ ಅಧಿಕಾರ ನೀಡಿ ಎಂದು ಪಟ್ಟ ಹಿಡಿದರು.

ಬಳಿಕ ಪಾಲಿಕೆ ಐದು ಸ್ಥಾಯಿ ಸಮಿತಿ ಅಧ್ಯಕ್ಷರು ನಮಗೆ ಅಧಿಕಾರ ಮುಂದುವರೆಯುವ ಜತೆಗೆ ಸಭೆ ನಡೆಸುವ ಅಧಿಕಾರ ಇರುವ ಬಗ್ಗೆ ಈಗಲೇ ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದು ಸದನದ ಬಾವಿಗಿಳಿದರು. ಇದರಿಂದ ಮತ್ತಷ್ಟು ಗೊಂದಲ ನಿರ್ಮಾಣವಾದ್ದರಿಂದ ಮೇಯರ್‌ ಒಂದು ಗಂಟೆಯ ಕಾಲ ಸಭೆಯನ್ನು ಮುಂದೂಡಿದರು. 5.50ಕ್ಕೆ ಮತ್ತೆ ಸಭೆ ಆರಂಭವಾದರೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಮೇಯರ್‌ ಕೌನ್ಸಿಲ್‌ ಸಭೆ ನಡೆಸುವುದು ಸಿಂಧು ಆಗಲಿದೆಯೇ ಎಂದು ಚರ್ಚೆಗಿಳಿದರು. ಇದರಿಂದ ಕೆರಳಿದ ಮೇಯರ್‌ ಕಾರ್ಯಸೂಚಿ 10ರಲ್ಲಿದ್ದ ಮೈಸೂರು ನಗರದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ನೀಡಲಾಗಿದೆ ಎಂದು ಹೇಳಿ ಸಭೆ ಮುಕ್ತಾಯಗೊಳಿಸಿ ಹೊರನಡೆದರು.

ಇದರಿಂದ ಬಿಜೆಪಿ ಸದಸ್ಯರು ಖುಷಿಯಿಮದ ಟೇಬಲ್‌ ಕುಟ್ಟಿ ಸ್ವಾಗತಿಸಿದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಚರ್ಚೆಯೇ ನಡೆಸದೇ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ಅನುಮತಿ ನೀಡಿರುವುದು ಅಸಿಂಧು ಹಾಗೂ ಮೇಯರ್‌ ಅವಧಿ ಮುಗಿದರೂ ಕೌನ್ಸಿಲ್‌ ನಡೆಸಿರುವುದು ಅಸಿಂಧು ಎಂದು ಸದನದ ಬಾವಿಗಿಳಿದು ಮೇಯರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾತ್ರಿವರೆಗೂ ಧರಣಿ ನಡೆಸಿದರು.

ಸಭೆಯಲ್ಲಿ ಉಪ ಮೇಯರ್‌ ಅನ್ವರ್‌ ಬೇಗ್‌, ಆಡಳಿತ ಮತ್ತು ವಿಪಕ್ಷ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next