Advertisement

Mysuru,ಚಾಮರಾಜನಗರ ಗೆಲ್ಲಲು ಸಿದ್ದು ತಂತ್ರ:  ತವರು ಜಿಲ್ಲೆಯಲ್ಲಿ 4 ದಿನಗಳ ವಾಸ್ತವ್ಯ  

11:27 PM Mar 25, 2024 | Team Udayavani |

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಅಖಾಡಕ್ಕಿಳಿದಿದ್ದು, ಚುನಾವಣ ಕಾರ್ಯತಂತ್ರ ಹೆಣೆಯುವಲ್ಲಿ ತಲ್ಲೀನರಾಗಿದ್ದಾರೆ.

Advertisement

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಮತ ಬೇಟೆಗೆ ಇಳಿದಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ 4 ದಿನಗಳ ಕಾಲ ಮೈಸೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರು ಸಚಿವರು, ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ.

ರವಿವಾರ ಮೈಸೂರಿಗೆ ಬಂದಿರುವ ಸಿಎಂ ಬುಧವಾರದವರೆಗೆ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಸದ್ಯಕ್ಕೆ ಎಚ್‌.ಡಿ.ಕೋಟೆ ತಾಲೂಕು ಬಳಿಯ ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ತಮ್ಮ ಆಪ್ತ ಸಚಿವರಾದ ಕೆ.ವೆಂಕಟೇಶ್‌, ಡಾ| ಎಚ್‌.ಸಿ. ಮಹದೇವಪ್ಪ, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಜತೆ ಉಳಿದುಕೊಂಡು ಶಾಸಕರು ಮತ್ತು ತಾಲೂಕು, ಹೋಬಳಿ ಮಟ್ಟದ ಮುಖಂಡರೊಂದಿಗೆ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆ ಕಾಂಗ್ರೆಸ್‌ ಶಾಸಕರಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹೀಗಾಗಿ ನಮಗೆ ಗೆಲ್ಲುವ ಪೂರಕ ವಾತಾವರಣವಿದ್ದು ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ತಲಾ 50 ಸಾವಿರ ಮುನ್ನಡೆ ಕೊಡಿಸುವುದು ಹಾಗೂ ಸೋತಿರುವ ಕ್ಷೇತ್ರಗಳಲ್ಲಿ 30 ಸಾವಿರ ಮುನ್ನಡೆ ಕೊಡಿಸುವಂತೆ ಟಾರ್ಗೆಟ್‌ ಫಿಕ್ಸ್‌ ಮಾಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಜಾತಿ ಸಮೀಕರಣಕ್ಕೆ ಕೈ ಹಾಕಿದ ಸಿಎಂ
ಪ್ರತಿ ಕ್ಷೇತ್ರದಲ್ಲಿ ಪ್ರಬಲ ಜಾತಿಗಳ ಮತಗಳನ್ನು ಸೆಳೆಯಲು ಮುಂದಾಗಿರುವ ಸಿಎಂ, ಆಯಾ ಜಾತಿಯ ಮುಖಂಡರ‌ನ್ನು ಕರೆದು ಆಪ್ತತೆಯಿಂದ ಮಾತನಾಡಿಸಿ, ಅವರಿಗೆ ಆಯಾ ಜಾತಿಯ ಮತಗಳನ್ನು ಹೆಚ್ಚಾಗಿ ತರಲು ಸ್ಥಳೀಯ ಮಟ್ಟದ ಉಸ್ತುವಾರಿ ವಹಿಸುತ್ತಿದ್ದಾರೆ. ಹಾಗೆಯೇ ಈ ಮುಖಂಡರು ಬೂತ್‌ ಮಟ್ಟದಲ್ಲಿರುವ ತಮ್ಮ ಜಾತಿಯ ಪ್ರಮುಖರನ್ನು ಸಂಪರ್ಕಿಸಿ ಪಕ್ಷಕ್ಕೆ ಆದಷ್ಟೂ ಹೆಚ್ಚು ಮತವನ್ನು ಕೊಡಿಸುವಂತೆ ಓಲೈಸುವಲ್ಲಿ ನಿರತರಾಗಿದ್ದಾರೆ. ಜತೆಗೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾಕ ಮತಗಳು ವಿಭಾಗ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದು ಚಾಮರಾಜನಗರ ಕ್ಷೇತ್ರದ ಜವಾಬ್ದಾರಿಯನ್ನು ಮಹದೇವಪ್ಪ ಹೆಗಲಿಗೆ ಹಾಕಿದ್ದು, ಪುತ್ರ ಯತೀಂದ್ರಗೆ ವರುಣಾ, ಎಚ್‌.ಡಿ.ಕೋಟೆ, ನಂಜನಗೂಡು ಭಾಗದ ಜವಾಬ್ದಾರಿ ವಹಿಸಿದ್ದರೆ, ಮೈಸೂರು ಗ್ರಾಮಾಂತರ ಭಾಗದ ಜವಾಬ್ದಾರಿಯನ್ನು ಸಚಿವ ಕೆ.ವೆಂಕಟೇಶ್‌ಗೆ ನೀಡಿ ಲಕ್ಷ್ಮಣ್‌ ಪರ  ಸ್ಥಳೀಯರನ್ನು ಒಗ್ಗೂಡಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

Advertisement

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next