Advertisement

ಮೈಸೂರು, ಚಾ.ನಗರದಲ್ಲಿ ಲಿಂಗಾಯಿತ ಸಮುದಾಯದ ಕೊಂಡಿ

12:35 PM Jan 04, 2017 | Team Udayavani |

ಚಾಮರಾಜನಗರ: ಸಕ್ಕರೆ ಹಾಗೂ ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ನಿಧನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಾದ ದೊಡ್ಡ ನಷ್ಟವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 1 ಸಂಸತ್‌ ಕ್ಷೇತ್ರ, 4 ವಿಧಾನಸಭಾ ಕ್ಷೇತ್ರ, ಜಿಪಂ, 4 ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಅಧಿಕಾರಕ್ಕೆ ಬರುವಲ್ಲಿ ಮಹದೇವಪ್ರಸಾದ್‌ ಪಾತ್ರ ಪ್ರಮುಖವಾದದ್ದು.

Advertisement

2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದ ಮಹದೇವಪ್ರಸಾದ್‌ ಗುಂಡ್ಲುಪೇಟೆ ಕ್ಷೇತ್ರದಿಂದ ಗೆದ್ದು ಬಂದರು. ಆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕಕ್ಕು ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಆಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಎಂಬುದು ಗಮನಾರ್ಹ. ಈ ವೇಳೆ ಅವರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಗಿದ್ದರು.  4 ಶಾಸಕರಲ್ಲಿ ಅವರೇ ಹಿರಿಯರಾದ್ದರಿಂದ ಸಹಜ ವಾಗಿಯೇ ಜಿಲ್ಲೆಯ ನಾಯಕತ್ವ ಅವರ ಕೈಯಲ್ಲಿತ್ತು. ಕಾಂಗ್ರೆಸ್‌ನ ಎಲ್ಲ ನೀತಿ ನಿರ್ಧಾರ ಗಳೂ ಅವರ ಆದೇಶದಂತೆಯೇ ನಡೆಯುತ್ತಿದ್ದವು.

2013ರ ಚುನಾವಣೆಯಲ್ಲೂ ಕಾಂಗ್ರೆಸ್‌ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತು. ಅಷ್ಟಲ್ಲದೇ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಇದಕ್ಕೆ ಮಹದೇವಪ್ರಸಾದ್‌ ಪಕ್ಷ ಸಂಘಟನೆ ಪ್ರಮುಖ ಕಾರಣ. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರಗಾರಿಕೆ ಎಲ್ಲವೂ ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿತ್ತು.

ಲಿಂಗಯಿತ ಸಮುದಾಯದ ಏಕೈಕ ನಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮ ರಾಜನಗರ ಜಿಲ್ಲೆಯ ವಿಧಾನಸಭೆಗಳು, ಸಂಸತ್‌, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯ್ತಿಗಳಲ್ಲಿ, ನಗರ-ಪುರಸಭೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದ ಮತದಾರರಿಗೆ ನಾನು ಆಭಾರಿ ಎಂದು ಹೇಳುತ್ತಿರುತ್ತಾರೆ. ಈ ಸಾಧನೆಯ ಹಿನ್ನೆಲೆಯಲ್ಲಿದ್ದವರು ಮಹದೇವಪ್ರಸಾದ್‌.

ಚಾಮರಾಜನಗರ ಜಿಲ್ಲೆಯಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಪಕ್ಷಕ್ಕೆ ಲಿಂಗಾಯತ ಮತಗಳು ಬರುವುದರಲ್ಲಿ ಮಹದೇವಪ್ರಸಾದ್‌ ಅವರೇ ಬ್ರಾಂಡ್‌ ನೇಮ್‌ ಎಂಬುದರಲ್ಲಿ ಎರಡನೇ ಮಾತಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಏಕೈಕ ಲಿಂಗಾಯತ ಲೀಡರ್‌ ಮಹದೇವಪ್ರಸಾದ್‌. ಹೀಗಾಗಿ ಚುನಾವಣೆಗಳಲ್ಲಿ ಲಿಂಗಾಯತರ ಮತಗಳನ್ನು ಕಾಂಗ್ರೆಸ್‌ಗೆ ಮಹದೇವಪ್ರಸಾದ್‌ ಸೆಳೆಯುತ್ತಿದ್ದರು. ಈ ಮಾತು ಮೈಸೂರು ಜಿಲ್ಲೆಗೂ ಅನ್ವಯಿಸುತ್ತದೆ.

Advertisement

ಅಹಿಂದ ಮತಗಳು ಸಹಜವಾಗೇ ಕಾಂಗ್ರೆಸ್‌ಗೆ ಬರುತ್ತಿದ್ದವು. ಬಿಜೆಪಿಗೆ ಬಹುತೇಕ ಲಿಂಗಾಯ್ತರ ಮತಗಳು ಹೋದರೂ, ಅಹಿಂದ ಮತಗಳ ಜೊತೆಗೆ ಬೇಕಾದ ಅಗತ್ಯ ಲಿಂಗಾಯ್ತ ಮತಗಳನ್ನು ಮಹದೇವಪ್ರಸಾದ್‌ ಗಳಿಸಿಕೊಡುತ್ತಿದ್ದರು. ಹೀಗಾಗಿ ಪ್ರಬಲ ಲಿಂಗಾಯತ ಮುಖಂಡ ನನ್ನು, ಅದರ ಹೊರತಾಗಿಯೂ ಚಾಣಾಕ್ಷ ರಾಜಕೀಯ ಪಟುವನ್ನೂ ಕಾಂಗ್ರೆಸ್‌ ಪಕ್ಷ ಕಳೆದುಕೊಂಡಿದೆ. ಇದು ಮೈಸೂರು- ಚಾಮರಾಜನಗರ ಭಾಗದಲ್ಲಿ ಪಕ್ಷಕ್ಕೆ ಅಕ್ಷರಶಃ ತುಂಬಲಾರದ ನಷ್ಟವಾಗಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next