ಮೈಸೂರು: ಮುಡಾ ಹಗರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಯದುವೀರ್, ಶಾಸಕ ಶ್ರೀವತ್ಸ ಸೇರಿ ಬಿಜೆಪಿ ನಾಯಕರು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ಪೊಲೀಸರು ತುಂಬಿಕೊಂಡು ಹೋಗಿದ್ದಾರೆ.
ಮಹಾರಾಜ ಕಾಲೇಜು ಬಳಿ ಹೈಡ್ರಾಮ ನಡೆದಿದೆ. ಬಿಜೆಪಿ ನಾಯಕರಿದ್ದ ವಾಹನದಿಂದ ಬ್ಯಾರಿಕೇಡ್ ನುಗ್ಗಿಸಿ ಮುಡಾ ಕಡೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದಾರೆ. ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಕೊನೆಗೂ ಪೊಲೀಸರು ವಾಹನ ಮುಡಾ ರಸ್ತೆ ಪ್ರವೇಶಿಸುವುದಕ್ಕೆ ಮುನ್ನವೇ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆಯುವ ಭೀತಿಯಿಂದ ಗೂಡ್ಸ್ ಆಟೋದಲ್ಲಿ ಬಂದ ಆರ್.ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳ್ಳ, ಕಳ್ಳ.. ಸಿದ್ದರಾಮಯ್ಯ ಘೋಷಣೆ
ಮೂಡಾ ಹಗರಣ ವಿರೋಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಸಿಎಂ ವಿರುದ್ಧ ಘೋಷಣೆ ಕೂಗಲಾಯಿತು. ಕಳ್ಳ, ಕಳ್ಳ.. ಸಿದ್ದರಾಮಯ್ಯ ಕಳ್ಳ, ಸುಳ್ಳ, ಸುಳ್ಳ.. ಸಿದ್ದರಾಮಯ್ಯ ಸುಳ್ಳ, ಸೈಟ್ ಕದ್ದಿದ್ಯಾರು ಸಿದ್ದರಾಮಯ್ಯ ಎಂದು ಘೋಷಣೆ ಕೂಗಲಾಯಿತು. ಸಿದ್ದರಾಮಯ್ಯ ರಾಜಿನಾಮೆ ನೀಡುವಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಂಸದ ಯದುವೀರ್, ಸರ್ಕಾರದ ಆಡಳಿತ ಯಂತ್ರ ವಿಫಲವಾಗಿದೆ. ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ. ಡೆಂಗ್ಯೂ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಗ್ಯಾರಂಟಿ ಯೋಜನೆಗಾಗಿ ಸರ್ಕಾರದ ಖಜಾನೆ ಖಾಲಿಯಾಗಿದೆ. ಮೈಸೂರು ಸಂಸ್ಥಾನದಿಂದ ಇಂದಿನವರೆಗೂ ನಮ್ಮ ರಾಜ್ಯ ಪ್ರಗತಿಪರವಾಗಿತ್ತು. ಈಗ ನಮ್ಮ ರಾಜ್ಯ ಆರ್ಥಿಕವಾಗಿ ಹಿಂದುಳಿಯುತ್ತಿದೆ. ಈ ಭ್ರಷ್ಟ ಸರ್ಕಾರದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಸಿಎಂ ಮೈಸೂರನ್ನು ಪ್ರತಿಷ್ಠೆಯಾಗಿ ತೆಗದುಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರ ಕಡಿಮೆ ಮಾಡಲು ಪ್ರತಿಷ್ಠೆಯಿಲ್ಲ. ಮುಡಾ ಹಗರಣವನ್ನ ಸಿಬಿಐಗೆ ವಹಿಸಬೇಕು. ಈ ಬಗ್ಗೆ ಸಂಪೂರ್ಣ ತನಿಖೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.