Advertisement

ಮೈಸೂರು ಪಾಲಿಕೆ ಜೆಡಿಎಸ್‌-ಬಿಜೆಪಿ ತೆಕ್ಕೆಗೆ

06:10 AM Jan 25, 2018 | Team Udayavani |

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್‌ ಬಳಸಿದ ಮೀಸಲಾತಿ ತಂತ್ರಕ್ಕೆ ಪ್ರತಿಯಾಗಿ ಜೆಡಿಎಸ್‌-ಬಿಜೆಪಿ ರೂಪಿಸಿದ ಪ್ರತಿತಂತ್ರದಿಂದ ಮೈಸೂರು ಮಹಾನಗರಪಾಲಿಕೆಯ 5ನೇ ಅವಧಿಗೆ ಮೇಯರ್‌ ಆಗಿ 23ನೇ ವಾರ್ಡಿನ ಸದಸ್ಯೆ ಟಿ.ಭಾಗ್ಯವತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪ ಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನ ಇಂದಿರಾ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ ತವರಿನಲ್ಲಿ ಪಾಲಿಕೆ ಅಧಿಕಾರ ಹಿಡಿಯಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮತ್ತೂಮ್ಮೆ ಮುಖಭಂಗ ಅನುಭವಿಸುವಂತಾಯಿತು.

Advertisement

ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ನಡೆದ ಚುನಾವಣಾ ವಿಶೇಷ ಸಭೆ ಪಾಲಿಕೆ ಸದಸ್ಯರ ಕೋಲಾಹಲ ಹಾಗೂ ಪ್ರತಿಭಟನೆಯೊಂದಿಗೆ ಆರಂಭಗೊಂಡಿತು. ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಶಿವಾನಂದ್‌ ಕಳಸದ್‌ ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ತಮ್ಮ ಸದಸ್ಯರೊಬ್ಬರನ್ನು ಜೆಡಿಎಸ್‌ ಮತ್ತು ಬಿಜೆಪಿಯವರು ಹೈಜಾಕ್‌ ಮಾಡಿ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಎಂದು ಗದ್ದಲ ನಡೆಸುತ್ತಿದ್ದಾಗಲೇ ಸಭಾಂಗಣಕ್ಕೆ ಪೊಲೀಸರು ಮತ್ತು ಜೆಡಿಎಸ್‌ ಸದಸ್ಯರ ರಕ್ಷಣೆಯಲ್ಲಿ ಬಂದ ಕಾಂಗ್ರೆಸ್‌ ಬಂಡಾಯ ಸದಸ್ಯೆ ಟಿ.ಭಾಗ್ಯವತಿ ಬಂದು ಸಂಸದ ಪ್ರತಾಪ್‌ಸಿಂಹ ಅವರ ಪಕ್ಕದಲ್ಲಿ ಕುಳಿತರು. ಈ ವೇಳೆ ಕಾಂಗ್ರೆಸ್‌ ಸದಸ್ಯರು ಜೆಡಿಎಸ್‌-ಬಿಜೆಪಿ ಸದಸ್ಯರ ಜೊತೆ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಈ ಹಂತದಲ್ಲಿ ನಡೆದ ನೂಕಾಟದಲ್ಲಿ ಸಚಿವ ತನ್ವೀರ್‌ಸೇs… ಕೆಳಗೆ ಬಿದ್ದರೆ, ಸದಸ್ಯೆ ಭಾಗ್ಯವತಿ ಕಣ್ಣೀರು ಹಾಕಿದರು. ಈ ನಡುವೆಯೇ ಚುನಾವಣಾಧಿಕಾರಿಗಳು ಪ್ರಕ್ರಿಯೆ ಆರಂಭಿಸಿದರು. ಇದನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸಭೆ ಬಹಿಷ್ಕಾರ ಮಾಡಿದರು. ಬಳಿಕ ಚುನಾವಣೆ ನಡೆಯಿತು.

ಬಂಡಾಯಕ್ಕೆ 43 ಮತ
ನಗರ ಪಾಲಿಕೆಯ ಮೇಯರ್‌-ಉಪಮೇಯರ್‌ ಮತ್ತು ನಾಲ್ಕು ಸ್ಥಾಯಿಸಮಿತಿಗಳ ಸದಸ್ಯ ಸ್ಥಾನಕ್ಕೆ ಬೆಳಗ್ಗೆ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಜೆಡಿಎಸ್‌-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಟಿ.ಭಾಗ್ಯವತಿ 43 ಮತಗಳನ್ನು ಪಡೆದು ಆಯ್ಕೆಯಾದರು. ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಆರ್‌.ಕಮಲ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಮತದಾನ ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್‌ನ ಕಮಲ ಪರ ಯಾವುದೇ ಮತ ಚಲಾವಣೆಯಾಗಲಿಲ್ಲ. ಇನ್ನು ಉಪಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನ ಇಂದಿರಾ ಮಹೇಶ್‌ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next