ಮೈಸೂರು: ಜಮೀನೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಹುಲಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಚಿಕ್ಕನಹಳ್ಳಿ ಅರಣ್ಯ ಬಳಿ ನಡೆದಿದೆ. ಐದು ವರ್ಷದ ಗಂಡು ಹುಲಿ ಸೆರೆಯಾಗಿದೆ.
ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಕಾಣಿಸಿಕೊಂಡಿದ್ದ ಹುಲಿ ಆತಂಕ ಸೃಷ್ಟಿ ಮಾಡಿತ್ತು. ಕಳೆದ ವಾರವಷ್ಟೆ ಮೈಸೂರು ವಿಮಾನ ನಿಲ್ದಾಣದ ಬಳಿ ಅಪಘಾತದಲ್ಲಿ ಹುಲಿಯೊಂದು ಸಾವನಪ್ಪಿತ್ತು. ಹುಲಿ ಸೆರೆಗೆ ಹಲವು ಕಡೆ ಬೋನನ್ನು ಇರಿಸಲಾಗಿತ್ತು.
ಹುಲಿಯನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಲಾಗಿದ್ದು, ಹುಲಿ ಆರೋಗ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಹುಲಿಯ ವಯಸ್ಸು ಚಿಕ್ಕದಾಗಿದ್ದರಿಂದ ಮತ್ತೆ ಹುಲಿಯನ್ನ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ. ಹುಲಿಯ ಚಲನವಲನ ಗಮನಿಸುವ ಸಲುವಾಗಿ ರೇಡಿಯೋ ಕಾಲರ್ ಅಳವಡಿಸಿ ಅರಣ್ಯ ಇಲಾಖೆ ಮತ್ತೆ ಕಾಡಿಗೆ ಬಿಡಲಿದೆ.
ಸದ್ಯ ಸ್ಥಳಕ್ಕೆ ಮೈಸೂರು ವೃತ್ತದ ಸಿ.ಎಫ್ ಡಾ.ಮಾಲತಿ ಪ್ರಿಯಾ, ಡಿ.ಸಿ.ಎಫ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.