ಮೈಸೂರು: ನಂಜನಗೂಡಿನಲ್ಲಿ ನಡೆಯುತ್ತಿರುವ ಮದುವೆಯೊಂದು ವಿಶಿಷ್ಟ ಕಾರಣಕ್ಕಾಗಿ ಗಮನ ಸೆಳೆದಿದೆ.
ಡಾ.ಯತೀಶ್ ಹಾಗೂ ಡಾ.ಅಪೂರ್ವ ಮದುವೆ ಕಾರ್ಯಕ್ರಮಗಳು ಶನಿವಾರ ಹಾಗು ಭಾನುವಾರ ನಡೆಯುತ್ತಿದ್ದು, ತಂದೆಯನ್ನ ಕಳೆದುಕೊಂಡಿದ್ದ ವರ ಡಾ.ಯತೀಶ್ ಮದುವೆಗೆಂದು ತಂದೆಯ ಮೇಣದ ಪ್ರತಿಮೆ ಮಾಡಿಸಿದ್ದಾರೆ. ಮದುವೆ ಶಾಸ್ತ್ರ ಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಪೂಜೆಗೆ ಕುಳಿತು ಗಮನ ಸೆಳೆದಿದ್ದಾರೆ.
ವರ ಯತೀಶ್ ತಂದೆ ರಮೇಶ್ ಕಳೆದ ಒಂದು ವರ್ಷದ ಹಿಂದೆ ಕೋವಿಡ್ ನಿಂದ ಮೃತಪಟ್ಟಿದರು. ರಮೇಶ್ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರದ ನಿವಾಸಿಯಾಗಿದ್ದು, ಇವರ ಪುತ್ರ ಯತೀಶ್ ಮೈಸೂರು ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ.
ನಂಜನಗೂಡು ತಾಲೂಕಿನ ಮಲ್ಕುಂಡಿಯ ವಧು ಡಾ.ಅಪೂರ್ವ ಜೊತೆ ಯತೀಶ್ ಅವರ ವಿವಾಹ ನಿಶ್ಚಯವಾಗಿದ್ದು, ಇಂದು ಮತ್ತು ನಾಳೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ.
ಮದುವೆ ಸಮಾರಂಭದಲ್ಲಿ ಎಲ್ಲರ ಆಕರ್ಷಣೆ ಮರೆಯಾದ ರಮೇಶ್ ಅವರು ಮತ್ತೆ ಬಂದು ಕುಳಿತಿರುವಂತೆ ಭಾಸವಾಗುವ ಮೇಣದ ಪ್ರತಿಮೆಯ ಮೇಲೆ ಕೇಂದ್ರೀಕೃತವಾಗುತ್ತಿದೆ. ಮಾಧ್ಯಮಗಳ ಗಮನವೂ ಸೆಳೆದಿದೆ.