ಮೈಸೂರು: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಸೋಂಕಿಗೆ 6 ಮಂದಿ ಬಲಿಯಾಗಿದ್ದರೆ, 151 ಮಂದಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ರೌದ್ರಾವತಾರ ತಾಳಿದ್ದು, ಕಳೆದೊಂದು ವಾರದಲ್ಲಿ 500ಕ್ಕೂ ಹೆಚ್ಚು ಹೊಸ ಪ್ರಕರಣ ದಾಖಲಾದರೆ, 31 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದಿನೇದಿನೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಇಡೀ ದೇಶದಲ್ಲಿ ಸಾವಿನ ಸರಾಸರಿ ಮಟ್ಟ ಮೈಸೂರಿನಲ್ಲೆ ಹೆಚ್ಚಾಗಿದೆ. ಅಲ್ಲದೆ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕಡಿವಾಣ ಹಾಕಲು ಸಾಧ್ಯವಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
6 ಮಂದಿ ಸಾವು: ಸೋಮವಾರ ಒಂದೇ ದಿನ ಸೋಂಕಿಗೆ 6 ಮಂದಿ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಸೋಮವಾರ 80, 70, 68, 76, 51 ಹಾಗೂ 52 ವರ್ಷದ ಪುರುಷರು ಜ್ವರ, ಕಫ, ಉಸಿರಾಟದ (ಎಸ್‌ಎಆರ್‌ಐ-ಸಾರಿ) ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಈ 6 ಮಂದಿ ಸಾವಿನೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 37ಕ್ಕೆ ಹೆಚ್ಚಳವಾಗಿದೆ. ಮೃತರೆಲ್ಲರ ಅಂತ್ಯ ಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳಂತೆ ಜಿಲ್ಲಾಡಳಿತವೇ ನೆರವೇರಿಸಿದೆ.
151 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಒಂದಂಕಿ, ಬಳಿಕ ಎರಡಂಕಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆ ಸಮಯದಲ್ಲಿ 22 ಪ್ರಕರಗಣಗಳೇ ಅಧಿಕವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನವೂ ಅರ್ಧಶಕತ ದಾಟುತ್ತಲೇ ಇದ್ದು, ಇದುವರೆಗೆ ಒಂದೇ ದಿನ 83 ಪಕರಣದಾಖಲಾಗಿದ್ದೇ ಅಧಿಕವಾಗಿತ್ತು. ಆದರೆ ಸೋಮವಾರ ದಾಖಲೆ ಬರೆದಿದ್ದು, ಒಂದೇ ದಿನ 151 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 966ಕ್ಕೆ ಏರಿಕೆಯಾಗಿದ್ದು, ಇನ್ನೊಂದು ದಿನದಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಲಿದೆ. ಇದರ ಜೊತೆಗೆ ಸೋಮವಾರ 54 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾ ಗಿದ್ದು, ಗುಣಮುಖವಾದವರ ಸಂಖ್ಯೆ 482ಕ್ಕೆ ಏರಿಕೆಯಾಗಿದೆ. ಸದ್ಯ 447 ಸಕ್ರೀಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದ ಸೋಂಕಿನ ಪ್ರಕರಣಗಳಲ್ಲಿ 57 ಐಎಲ್‌ಐ, 16 ಎಸ್‌ಎಆರ್‌ಐ(ಸಾರಿ), 4 ಪ್ರಯಾಣದ ಹಿನ್ನೆಲೆ, 35 ಸೋಂಕಿತರ ಸಂಪರ್ಕದಿಂದ ಬಂದಿದ್ದು, 39 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.