Advertisement

ಮೈಷುಗರ್‌ ಯಂತ್ರಗಳ ಸಾಗಾಟ: ಆರೋಪ

04:36 PM Dec 22, 2021 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆಯ ಯಂತ್ರಗಳನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಂಗಳವಾರ ಬೆಳಗ್ಗೆ ಮೈಷುಗರ್‌ ಕಾರ್ಖಾನೆಯ ಟರ್ಬನ್‌ ಯಂತ್ರವನ್ನು ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತಡೆ ಹಿಡಿದಿದ್ದಾರೆ.

Advertisement

ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ಜೀಪ್‌ವೊಂದು ಮೈಷುಗರ್‌ ಕಾರ್ಖಾನೆಯಲ್ಲಿದ್ದ ಟರ್ಬನ್‌ ಯಂತ್ರವನ್ನು ಕೊಂಡೊಯ್ಯಲು ಸಿದ್ಧತೆ ನಡೆಸಿತ್ತು. ಆಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಕರವೇ ಜಿಲ್ಲಾಧ್ಯಕ್ಷ ಎಚ್‌.ಡಿ.ಜಯರಾಂ ಹಾಗೂ ಕಾರ್ಯಕರ್ತರು ವಾಹನವನ್ನು ತಡೆ ಹಿಡಿದು ಪ್ರತಿಭಟನೆ ನಡೆಸಿದರು.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ವಾಹವನ್ನು ವಶಪಡಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. ಕರವೇ ಜೋಸೆಫ್‌, ಸೋಮಶೇಖರ್‌, ಚಿಕ್ಕೆçದೇಗೌಡ, ಮಲ್ಲಯ್ಯ ಇದ್ದರು.

ಪಿಎಸ್‌ಎಸ್‌ಕೆ ವಾಹನ ನೋಂದಣಿ ಜೀಪು

ಯಂತ್ರಗಳ ದಂಧೆ?: ಮೈಷುಗರ್‌ ಕಾರ್ಖಾನೆಯ ಲ್ಲಿರುವ ಉತ್ತಮ ಗುಣಮಟ್ಟದ ಯಂತ್ರಗಳನ್ನು ಬೇರೆ ಕಾರ್ಖಾನೆಗೆ ಸಾಗಿಸುವ ಮೂಲಕ ಮೈಷುಗರ್‌ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ. ಕಾರ್ಖಾನೆಯಲ್ಲಿ ಉತ್ತಮ ಗುಣಮಟ್ಟದ ಯಂತ್ರಗಳಿದ್ದು, ತಕ್ಷಣ ಪ್ರಾರಂಭಿಸಿದರೂ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿವೆ.

Advertisement

ಆದರೆ, ಇಲ್ಲಿನ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳು ಕಾರ್ಖಾನೆಯನ್ನು ಮುಚ್ಚುವ ಉದ್ದೇಶದಿಂದ ಯಂತ್ರಗಳನ್ನು ಬೇರೆಡೆ ಸಾಗಿಸಿ, ಯಂತ್ರಗಳು ಇಲ್ಲ ಎಂಬ ವರದಿ ತೋರಿಸುವ ಹಿನ್ನೆಲೆಯಲ್ಲಿ ಈ ರೀತಿಯ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

“ಮೈಷುಗರ್‌ ಕಾರ್ಖಾನೆ ಯಂತ್ರಗಳನ್ನು ಬೇರೆ ಖಾಸಗಿ ಕಾರ್ಖಾನೆಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ, ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ಜೀಪ್‌ವೊಂದು ಕಾರ್ಖಾನೆಯ ಟರ್ಬನ್‌ ಯಂತ್ರ ಕೊಂಡೊಯ್ಯಲು ಸಿದ್ಧತೆ ನಡೆಸಿತ್ತು. ಆಗ ನಾವು ಅದನ್ನು ತಡೆದಾಗ, ಪಿಎಸ್‌ಎಸ್‌ಕೆ ಸಿಬ್ಬಂದಿ ನಮಗೆ ಸರ್ಕಾರವೇ ಅನುಮತಿ ನೀಡಿದೆ ಎಂದು ತಿಳಿಸಿದರು. ಆಗ ನಾವು ಬಿಡದೆ ಪೊಲೀಸರಿಗೆ ಒಪ್ಪಿಸಿದ್ದೇವೆ.” ಎಚ್‌.ಡಿ.ಜಯರಾಂ, ಜಿಲ್ಲಾಧ್ಯಕ್ಷ, ಕರವೇ

“ನನ್ನ ಗಮನಕ್ಕೆ ಬಾರದೇ ಯಂತ್ರ ಕೊಂಡೊಯ್ಯಲು ಪ್ರಯತ್ನ ನಡೆದಿತ್ತು. ಆಗ ನಾನು ಅದನ್ನು ತಡೆದು ಖಾಸಗಿ ಕಾರ್ಖಾನೆ ವಾಹನ ಒಳ ಪ್ರವೇಶಿಸಲು ಅನುವು ಮಾಡಿಕೊಟ್ಟ ಇಬ್ಬರು ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.” ಶಿವಲಿಂಗೇಗೌಡ, ಅಧ್ಯಕ್ಷ, ಮೈಷುಗರ್‌ ಕಾರ್ಖಾನೆ.

Advertisement

Udayavani is now on Telegram. Click here to join our channel and stay updated with the latest news.

Next