Advertisement
ಮೈಮುಲ್ ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಿರುವಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಬೆನ್ನಲ್ಲೆ ಇದೆ ಮೊದಲ ಬಾರಿಗೆ ಮೈಮುಲ್ ಚುನಾವಣಾ ಅಖಾಡಕ್ಕೆ ಕುಮಾರಸ್ವಾಮಿ ಧುಮುಕಿ, ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಗುಡುಗುತ್ತಾ ಮತಯಾಚನೆಯಲ್ಲಿ ತಲ್ಲೀನರಾಗಿದ್ದಾರೆ. ಇದಕ್ಕೆ ಪ್ರತಿ ಸವಾಲಾಗಿ ಜಿ.ಟಿ.ದೇವೇಗೌಡರೂ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸಿದ್ದು, ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲದೊಂದಿಗೆ ಪೈಪೋಟಿಯಿಂದ ಕೂಡಿದೆ.ಒಂದೇ ಪಕ್ಷದಲ್ಲಿದ್ದರೂ ನಾನೊಂದು ತೀರಾ, ನೀನೊಂದು ಎಂಬಂತೆ ಮುನಿಸಿಕೊಂಡಿರುವ ಶಾಸಕ ರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರು ತಮ್ಮ ಬೆಂಬಲಿಗರನ್ನು ಪ್ರತ್ಯೇಕವಾಗಿ ಕಣಕ್ಕಿಳಿಸಿ ರುವುದರಿಂದ ಮೈಮುಲ್ ಚುನಾವಣಾ ಅಖಾಡ ರಂಗೇರಿದೆ.
Related Articles
Advertisement
ಜೆಡಿಎಸ್ ಪಾಳಯದಲ್ಲೇ ಜಿದ್ದಾಜಿದ್ದಿ: ಮೈಮುಲ್ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಪ್ರಯತ್ನ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಶತಾಯ ಗತಾಯ ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಅಧ್ಯಕ್ಷ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದು ಶಾಸಕ ಜಿ.ಟಿ.ದೇವೇಗೌಡರು ಸರ್ವ ಪ್ರಯತ್ನ ನಡೆಸಿದ್ದಾರೆ.
ಅದಕ್ಕಾಗಿ ಬಿಜೆಪಿ ನಾಯ ಕರ ಜತೆಗೆ ಆಂತರಿಕವಾಗಿ ಒಪ್ಪಂದ ಮಾಡಿಕೊಂಡು ತಮ್ಮ ಬೆಂಬಲಿಗರ ಪರವಾಗಿ ತೆರೆಮರೆಯಲ್ಲಿಕೆಲಸ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಜಿ.ಟಿ.ದೇವೇಗೌಡರು ಮೈಮುಲ್ ಆಡಳಿತ ತಮ್ಮ ಬೆಂಬಲಿಗರಿಂದಕೈಜಾರದಂತೆ ನೋಡಿಕೊಳ್ಳಲು ತಂತ್ರಗಾರಿಕೆ ಮಾಡಿದ್ದಾರೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರು ಹುಣಸೂರು ವಿಭಾಗದ ಚುನಾವಣೆ ಜವಾಬ್ದಾರಿ ಹೊತ್ತಿದ್ದಾರೆ.
ಇವರಿಗೆ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಜಿಟಿಡಿಗೆ ಕೈಜೋಡಿಸಿದ್ದಾರೆ. ಜಿ. ಟಿ.ದೇವೇಗೌಡರ ತಂಡದ ಅಭ್ಯರ್ಥಿಗಳನ್ನು ಸೋಲಿಸಲು ರಣತಂತ್ರ ಹೆಣೆದಿರುವ ಸಾ.ರಾ.ಮಹೇಶ್ ಕಾಂಗ್ರೆಸ್ ನಾಯಕರೊಂದಿಗೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಕಾಂಗ್ರೆಸ್-ಜಾ.ದಳ ಬೆಂಬಲಿತರನ್ನುಆಯ್ಕೆ ಮಾಡಿದ್ದಾರೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಮುಲ್ ಮಾಜಿ ನಿರ್ದೇಶಕ ಕೆ.ಸಿ.ಬಲರಾಮ್ ಸೇರಿದಂತೆ ಇನ್ನಿತರರು ಒಟ್ಟಾಗಿ ತಮ್ಮಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಿರುವುದರಿಂದ ಪೈಪೋಟಿ ಜೋರಾಗಿದೆ.
ಎಚ್‌ಡಿಕೆ-ಜಿಟಿಡಿ ಜಿದ್ದಾಜಿದ್ದಿ :
ಮೈಮುಲ್ ಆಡಳಿತವನ್ನು ಜಿಟಿಡಿ ಬೆಂಬಲಿಗರಿಂದ ಕಿತ್ತುಕೊಳ್ಳಲು ಹಾಗೂ ಜಿಟಿಡಿ ಶಕ್ತಿ ಕುಂದಿಸಲು ಮಾಜಿ ಸಿಎಂ ಎಚ್‌ಡಿಕೆ ಅಖಾಡಕ್ಕಿಳಿದು ಮತಯಾಚನೆಗೆ ಮುಂದಾಗಿದ್ದಾರೆ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಬದಲಿಗೆ ಪರ್ಯಾಯ ನಾಯಕರ ಹುಡುಕಾಟದಲ್ಲಿದ್ದಾರೆ. ಈ ನಡುವೆ ಶಾಸಕ ಜಿ.ಟಿ.ದೇವೇಗೌಡರೂ ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದು, 50 ವರ್ಷದ ಹಳೆ ಮರವನ್ನು ಅಷ್ಟು ಸುಲಭವಾಗಿ ಬೀಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿ, ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇದರಿಂದಾಗಿ ಎಚ್‌ಡಿಕೆ-ಜಿಟಿಡಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಚುನಾವಣೆ ಹೊಸ ಸ್ವರೂಪ ಪಡೆದುಕೊಂಡಿದೆ.