ಹೂವಿನಹಡಗಲಿ: ಕಬ್ಬಿಣದ ಸರಪಳಿ ಹರಿತಲೆ ಪರಾಕ್… ಇದು ನಾಡಿನ ಸುಪ್ರಸಿದ್ಧ ಮೈಲಾರಲಿಂಗೇ ಶ್ವರದ ಈ ವರ್ಷದ ಕಾರಣಿಕ ನುಡಿ. ನಾಡಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲೆ ಹೂವಿನಹಡ ಗಲಿಯ ಮೈಲಾರಲಿಂಗೇಶ್ವರ ಕ್ಷೇತ್ರದ ಮೈಲಾರಲಿಂಗ ಸ್ವಾಮಿ ಜಾತ್ರಾ ಉತ್ಸವ ಹಾಗೂ ಕಾರ್ಣಿಕೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಕಳೆದ ಕೆಲ ದಿನದಿಂದ ವಿವಿಧ ಧಾರ್ಮಿಕ ಆಚರಣೆಗಳು ನಡೆದಿದ್ದು, ಜಾತ್ರೆಯ ಪ್ರಮುಖ ಘಟ್ಟ ಎಂದೇ ಕರೆಯಲ್ಪಡುವ ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮೈಲಾರ ಕ್ಷೇತ್ರದಿಂದ ಅನತಿ ದೂರದಲ್ಲಿರುವ ಡೆಂಕನಮರಡಿಯಲ್ಲಿ ಕಳೆದ 11 ದಿನಗಳಿಂದ ವ್ರತಾಚರಣೆಯಲ್ಲಿ ತೊಡಗಿದ್ದ ಗೊರವಯ್ಯ ಈ ವರ್ಷದ ಕಾರಣಿಕ ನುಡಿದರು. ಶುಕ್ರವಾರ ಸಂಜೆ 5.30 ರ ಸುಮಾರಿಗೆ 18 ಅಡಿ ಎತ್ತರದ ಬಿಲ್ಲನ್ನು ಸರಸರನೇ ಏರಿದ ಗೊರವಯ್ಯ ತದೇಕ ಚಿತ್ತನಾಗಿ ಕೆಲ ಕ್ಷಣ ಆಕಾಶ ವೀಕ್ಷಿಸಿ ಸದ್ದಲೇ…ಎನ್ನುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ಸಂಪೂರ್ಣ ಮೌನರಾಗಿ ದೈವವಾಣಿಗಾಗಿ ಕಾದರು. ನಂತರ ಗೊರವಯ್ಯ ರಾಮಣ್ಣ “ಕಬ್ಬಿಣದ ಸರಪಳಿ ಹರಿತಲೆ ಪರಾಕ್’ ಎಂಬ ದೈವವಾಣಿ ನುಡಿದು ಬಿಲ್ಲನಿಂದ ಕೆಳಕ್ಕೆ ಜಿಗಿದರು.
ಕಾರ್ಣಿಕ ನುಡಿ ವಿಶ್ಲೇಷಣೆ: ಈ ದೈವವಾಣಿಯಿಂದ ಇಡೀ ನಾಡಿನ ವರ್ಷದ ಭವಿಷ್ಯ ಅಡಗಿದೆ. ಈ ನುಡಿಯ ಆಧಾರದಲ್ಲಿ ರಾಜಕೀಯ, ಮಳೆ, ಬೆಳೆ ಎಲ್ಲವನ್ನೂ ನಿರ್ಧರಿಸಲಾಗುತ್ತದೆ. ಈ ಬಾರಿಯ ಕಾರ್ಣಿಕ ನುಡಿ ಕಬ್ಬಿಣದ ಸರಪಳಿ ಎನ್ನುವುದು ಕಠಿಣ. ಇಂತಹ ಕಠಿಣವಾದ ಸರಪಳಿ ಹರಿತಲೇ ಎಂದರೆ ಜನರ ಕಷ್ಟದ ದಿನಗಳು ದೂರವಾಗಿ ಭವಿಷ್ಯದಲ್ಲಿ ಒಳಿತನ್ನು ಕಾಣಬಹುದು. ರೈತಾಪಿ ವರ್ಗದವರಿಗೆ ಭವಿಷ್ಯದ ದಿನಗಳು ಉತ್ತಮವಾಗಿರಲಿವೆ. ಮಳೆ-ಬೆಳೆ ಚೆನ್ನಾಗಿ ಆಗಲಿದೆ. ರಾಜಕೀಯವಾಗಿಯೂ ಸಹ ಗೊಂದಲ, ಗೋಜಲು ಎಲ್ಲ ಮಾಯವಾಗಿ ಉತ್ತಮ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕಾರ್ಣಿಕೋತ್ಸವದಲ್ಲಿ ಮುಜರಾಯಿ ಖಾತೆ ಸಚಿವ ಪಿ.ಟಿ. ಪರಮೇಶ್ವರ್‌ನಾಯ್ಕ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಎಸ್‌ಪಿ ಅರಣ್
ರಂಗರಾಜನ್, ಸೇರಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.