Advertisement

ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ

02:49 PM Mar 02, 2021 | Team Udayavani |

ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಸೋಮವಾರ ಸಂಜೆ ಜರುಗಿದ್ದು, ಮುತ್ತಿನ ರಾಶಿ ಮೂರು ಪಾಲು ಆಯ್ತಲೇ ಪರಾಕ್‌’ ಎನ್ನುವ  ದೈವವಾಣಿಯನ್ನು ಕಾರ್ಣಿಕದ ಗೊರವಯ್ಯ ನುಡಿದಿದ್ದಾರೆ.

Advertisement

ಸಂಜೆ 4.3 ಕ್ಕೆ ವಂಶ ಪಾರಂಪರ್ಯ ಧರ್ಮಾಧಿಕಾರಿ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್‌ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ಕಾರ್ಣಿಕ ಹೇಳುವ ಡೆಂಕನ ಮರಡಿಗೆ ಕರೆ ತರಲಾಯಿತು.

ಕಾರ್ಣಿಕ ನುಡಿಯುವ ಸ್ಥಳಕ್ಕೆ ಶ್ರೀ ಸ್ವಾಮಿ ಉತ್ಸವ ಮೂರ್ತಿ ಆಗಮಿಸುತ್ತಿದ್ದಂತೆಯೇ ನೆರದಿದ್ದ ಭಕ್ತರ “ಏಳು ಕೋಟಿ ಏಳು ಕೋಟಿ ಚಂಗಮಲೋ’ ಎನ್ನುವ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಸುಮಾರು 21 ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನು ಗೊರವಯ್ಯ ಶ್ರೀಗಳ ಆಶೀರ್ವಾದ ಪಡೆದು ಭಕ್ತರು ನೋಡ ನೋಡುತ್ತಿದ್ದಯೇ ಸರಸರನೇ ಏರಿ ತದೇಕ ಚಿತ್ತದಿಂದ ಸುತ್ತು ಮುಗಿಲನ್ನು ಒಂದು ಸುತ್ತು ವೀಕ್ಷಣೆ ಮಾಡಿ ನೆರದಿದ್ದ ಭಕ್ತರಿಗೆ ಸದ್ದಲೇ ಎನ್ನುವ ಸಂದೇಶ ನೀಡಿದಾಗ, ನೆರೆದಿದ್ದ ಭಕ್ತರ ಮನಸ್ಸೆಲ್ಲ ಕಾರ್ಣಿಕ ನುಡಿಯುವ ಗೊರವಯ್ಯನತ್ತ ಕೇಂದ್ರಿಕರಿಸಿದರು.

ಕ್ಷಣ ಹೊತ್ತು ಎಲ್ಲವೂ ಎಲ್ಲ ಕಡೆಯಲ್ಲೂ ಮೌನವಾವರಿಸಿ ಕ್ಷಣ ಹೊತ್ತು ಕೌತುಕದ ಸನ್ನಿವೇಶ ಸೃಷ್ಟಿಯಾಯಿತು. ನಂತರದಲ್ಲಿ ಕಾರ್ಣಿಕದ ಗೊರವಯ್ಯ “ಮುತ್ತಿನ ರಾಶಿ ಮೂರು ಪಾಲು ಆಯ್ತಲೇ ಪಾರಕ್‌’ ಎನ್ನುವ ದೈವವಾಣಿಯನ್ನು ನುಡಿಯುವ ಮೂಲಕ ಭುವಿಗೆ ಧುಮುಕಿದರು.

Advertisement

ಭಕ್ತರ ಸಂಖ್ಯೆ ಕಡಿಮೆ: ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸರಳವಾಗಿ ಕಾರ್ಣಿಕ ಆಚರಣೆಗೆ ಮುಂದಾಗಿತ್ತು. ಹೊರಗಿನ ಭಕ್ತರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಭಕ್ತರು ವಾರಕ್ಕೂ ಮುಂಚೆ ಕಟ್ಟಿಕೊಂಡು ಬರುತ್ತಿದ್ದ ಎತ್ತನ ಬಂಡಿ, ವಾಹನಗಳು ಎಲ್ಲದಕ್ಕೂ ನಿರ್ಬಂಧ ಹೇರಲಾಗಿತ್ತು. ಅಂಗಡಿ ಮುಂಗಟ್ಟುಗಳಿಗೆ ಯಾವುದೇ ಅವಕಾಶವಿರಲಿಲ್ಲ. ಹೀಗಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ಕಾರ್ಣಿಕಕ್ಕೆ ಸಾಕ್ಷಿಯಾದರು: ಕಾರ್ಣಿಕ ನುಡಿಯುವ ಸಂದರ್ಭದಲ್ಲಿ ವಂಶ ಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್‌, ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಸಂಸದದೇವೇಂದ್ರಪ್ಪ ಸೇರಿದಂತೆ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲ್‌ ಪಾಟೀಲ್‌, ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ,ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ವ್ಯಾಪಾರಸ್ಥರಿಗೆ ತೊಂದರೆ: ಮೈಲಾರ ಜಾತ್ರೆಗಾಗಿ ಸುಮಾರು 8-10 ದಿನ ಮುಂಚಿತವಾಗಿ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ವ್ಯಾಪಾರಸ್ಥರು ಮೈಲಾರಕ್ಕೆ ಆಗಮಿಸಿ ಅಂಗಡಿ ಹಾಕುತ್ತಿದ್ದರು. ಸಾಕಷ್ಟು ಪ್ರಮಾಣದಲ್ಲಿ ವ್ಯಾಪಾರ ವಹಿವಾಟಿ ನಡೆಯುವಮೂಲಕವಾಗಿ ವ್ಯಾಪರಸ್ಥರಿಗೆ ಆರ್ಥಿಕವಾಗಿ ಅನುಕೂಲವಾಗುತ್ತಿತ್ತು. ಈ ಬಾರಿ ಗ್ರಾಪಂ ಇದಕ್ಕೆ ಯಾವುದಕ್ಕೂ ಅವಕಾಶ ನೀಡದ ಕಾರಣ ಸಾಕಷ್ಟು ವ್ಯಾಪಾರಸ್ಥರ ವ್ಯಾಪಾರಕ್ಕೆ ತೊಂದರೆ ಆಯಿತು. ಗ್ರಾಮದ ಅಂಗಡಿಗಳು ಯಥಾ ರೀತಿಯಾಗಿ ವ್ಯಾಪಾರ ವಹಿವಾಟು ನಡೆಸಿದವು.

ಸಾಂಸ್ಕೃತಿಕ ಕಾರ್ಯಕ್ರಮ: ಜಾತ್ರೆ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ ಹಾಗೂ ವಿವಿಧ ನಾಟಕ ಕಂಪನಿಗಳು ಸುಕ್ಷೇತ್ರ ಮೈಲಾರದಲ್ಲಿ ಸಾಕಷ್ಟು ಕಾರ್ಯಕ್ರಮ ನೀಡುತ್ತಿದ್ದವು.  ಆದರೆ ಈ ಬಾರಿ ಇಂತಹ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಜಾತ್ರೆ ಸಪ್ಪೆಯಾಗಿ ಕಂಡು ಬಂತು.

 

Advertisement

Udayavani is now on Telegram. Click here to join our channel and stay updated with the latest news.

Next