ಮ್ಯಾನ್ಮಾರ್: ಮ್ಯಾನ್ಮಾರ್ ಮಿಲಿಟರಿ ದಂಗೆ ವಿರುದ್ಧ ಪ್ರತಿಭಟನಾ ನಿರತ ಜನರ ಮೇಲೆ ಮ್ಯಾನ್ಮಾರ್ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ(ಮಾರ್ಚ್ 03) ನಡೆದಿದೆ.
ಇದನ್ನೂ ಓದಿ:ಕೋವಿಡ್ 19 ಎಫೆಕ್ಟ್: 2021ನೇ ಸಾಲಿನಲ್ಲಿ ಇಪಿಎಫ್ ಬಡ್ಡಿದರ ಇಳಿಕೆ ಸಾಧ್ಯತೆ?
ಫೆಬ್ರುವರಿ 1ರಿಂದ ಮ್ಯಾನ್ಮಾರ್ ಆಡಳಿತವನ್ನು ಸೇನೆ ವಶಕ್ಕೆ ತೆಗೆದುಕೊಂಡ ಬಳಿಕ ದೇಶಾದ್ಯಂತ ಸೇನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಈವರೆಗೆ ಸುಮಾರು 30 ಮಂದಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಮ್ಯಾನ್ಮಾರ್ ನ ಎರಡನೇ ಅತೀದೊಡ್ಡ ನಗರವಾದ ಮ್ಯಾಂಡಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಘರ್ಷಣೆಯಿಂದ ಇಬ್ಬರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ. ಯಾಂಗಾನ್ ನಗರದಲ್ಲಿನ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸೆಂಟ್ರಲ್ ಟೌನ್ ನಲ್ಲಿ ಪೊಲೀಸರ ಗುಂಡಿನ ದಾಳಿಗೆ ಐವರು ಹಾಗೂ ಸೆಂಟ್ರಲ್ ನಗರವಾದ ಮೈಂಗ್ಯಾನ್ ನಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಯುವ ಕಾರ್ಯಕರ್ತ ಮೊಯಿ ಮೈಂಟ್ ಹೈನ್ ತಿಳಿಸಿರುವುದಾಗಿ ವರದಿ ಹೇಳಿದೆ.
ಪದಚ್ಯುತ ಸರ್ಕಾರದ ನಾಯಕಿ ಆ್ಯಂಗ್ ಸಾನ್ ಸೂ ಕೀ ಸೇರಿದಂತೆ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ನೆರೆಯ ದೇಶಗಳು ಮನವಿ ಮಾಡಿಕೊಂಡಿದ್ದವು, ಆದರೆ ಮ್ಯಾನ್ಮಾರ್ ಮಿಲಿಟರಿ ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ವಿರೋಧವನ್ನು ಹತ್ತಿಕ್ಕುತ್ತಿರುವುದಾಗಿ ವರದಿ ತಿಳಿಸಿದೆ.