ಸಿಂಧನೂರು: ನನ್ನ ಅವಧಿಯಲ್ಲಿ ನಿರ್ಮಾಣ ಆಗಿರುವ ಮಿನಿವಿಧಾನಸೌಧ, ಜೆಸ್ಕಾಂ ಕಚೇರಿ ಸೇರಿ ಅನೇಕ ಕಟ್ಟಡಗಳಿವೆ. ಇನ್ನು ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು, ಆ ಮೂಲಕವೇ ನನ್ನ ವಿರೋಧಿಗಳಿಗೆ ಉತ್ತರ ನೀಡಲು ಬಯಸುವೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಜನತಾ ಜಲಾಧಾರಾ ಯಾತ್ರೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನತಾ ಜಲಧಾರೆ ಯಾತ್ರೆಯನ್ನು ನಾಟಕ ಎಂದು ಟೀಕಿಸುವವರಿಗೆ ನನ್ನ ಪ್ರಶ್ನೆಯಿದೆ. ಅವರು ಏನಾದರೂ ಜನರಿಗಾಗಿ ಮಾಡಿದ್ದಾರೆ. 15 ನದಿಗಳ ಪವಿತ್ರಗಂಗೆಯನ್ನು ಸಂಗ್ರಹಿಸಿ ರಥಯಾತ್ರೆಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್ ಸಂಪೂರ್ಣ ಅಧಿಕಾರಕ್ಕೆ ಬಂದರೆ ಮಾತ್ರ, ನೀರಾವರಿ ಯೋಜನೆಗಳಿಗೆ ಆದ್ಯತೆ ದೊರೆಯುತ್ತದೆ ಎಂದರು.
ನಾನೇನು ಮಾಡಿದ್ದೇನೆ ಗೊತ್ತು
ನಾನು ಅಭಿವೃದ್ಧಿಯ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡಲು ಬಯಸುತ್ತೇನೆ. ನನ್ನ ಅವಧಿಯಲ್ಲಿ ಆಗಿರುವ ಕಾಮಗಾರಿಗಳನ್ನು ಪ್ರತಿಯೊಬ್ಬರೂ ಗಮನಿಸಬೇಕು. ನಗರ ಪ್ರದೇಶದಲ್ಲೂ ಪ್ರತಿ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ರೂಪಿಸಲಾಗುತ್ತಿದ್ದು, ಹತ್ತಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಗರ ಪ್ರದೇಶದ ಯಾವೊಂದು ರಸ್ತೆ ಉಳಿಯದಂತೆ ಸಿಸಿ ರಸ್ತೆ ಮಾಡಿಸುವುದು ನನ್ನ ಗುರಿ. ನಗರಕ್ಕೆ ಏನು ಮಾಡಿಲ್ಲವೆಂಬ ಟೀಕೆಗೆ ಇದೇ ನನ್ನ ಉತ್ತರ ಆಗಿರುತ್ತದೆ ಎಂದರು.
ಜೆಡಿಎಸ್ ಮುಖ್ಯ ಸಂಚಾಲಕ ಬಿ.ಹರ್ಷ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆ.ಹನುಮೇಶ, ಜೆಡಿಎಸ್ ಮುಖಂಡರಾದ ಅಶೋಕ ಉಮಲೂಟಿ, ಅಲ್ಲಂಪ್ರಭು ಪೂಜಾರ್, ಸುಮಿತ್ ಕುಮಾರ್ ತಡಕಲ್, ಶರಣಬಸವ ಗೋರೆಬಾಳ, ಶಂಕರಗೌಡ ಗದ್ರಟಗಿ, ನಗರಸಭೆ ಸದಸ್ಯ ಸತ್ಯನಾರಾಯಣ ದಾಸರಿ, ನಿರುಪಾದಿ ಸುಕಾಲಪೇಟೆ, ಶಂಕರಗೌಡ ಎಲೆಕೂಡ್ಲಿಗಿ ಸೇರಿದಂತೆ ಅನೇಕರು ಇದ್ದರು.