Advertisement

Tax: ಕೇಂದ್ರದ ವಿರುದ್ಧ “ನನ್ನ ತೆರಿಗೆ ನನ್ನ ಹಕ್ಕು” ಅಭಿಯಾನ

11:15 PM Feb 04, 2024 | Team Udayavani |

ಬೆಂಗಳೂರು: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಸಿಡಿದೆದ್ದ ಬೆನ್ನಲ್ಲೇ, ಈಗ ಸಾಮಾಜಿಕ ಜಾಲತಾಣ “ಎಕ್ಸ್‌’ನಲ್ಲಿ ಕನ್ನಡಿಗರು “ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ ಆರಂಭಿಸಿದ್ದಾರೆ. ಆ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ತೆರಿಗೆ ಹಂಚಿಕೆ ಸಂಬಂಧ ಕೇಂದ್ರದ
ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌, ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಮಧ್ಯೆ ಜಾಲತಾಣ “ಎಕ್ಸ್‌’ನಲ್ಲಿ ನನ್ನ ತೆರಿಗೆ ನನ್ನ ಹಕ್ಕು ‘#southtaxmovement ಹ್ಯಾಷ್‌ಟ್ಯಾಗ್‌ ಬಳಸಿ ಅಭಿಯಾನ ಆರಂಭವಾಗಿದ್ದು, ಟ್ರೆಂಡಿಂಗ್‌ನಲ್ಲಿದೆ. ಕನ್ನಡಿಗರ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ನೀಡಿದ್ದು ಮತ್ತಷ್ಟು ಬಲ ಬಂದಿದೆ.

Advertisement

ಅಂಕಿಅಂಶ ಸಹಿತ ಆಕ್ರೋಶ
ಅಂಕಿಅಂಶಗಳ ಸಹಿತ ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಆಗುತ್ತಿರುವ ಅನ್ಯಾಯವವನ್ನು ನೆಟ್ಟಿಗರು ಬಿಚ್ಚಿಟ್ಟಿದ್ದಾರೆ. “ಕರ್ನಾಟಕವು 4.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿಕೊಡುವ ಮೂಲಕ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯವಾಗಿದೆ. ಆದರೆ ವಾಪಸ್‌ ಚಿಲ್ಲರೆ ಹಣ ಸಾಕೆ?’ ಎಂದು ಕಿಡಿಕಾರಿದ್ದಾರೆ.

“ಕರ್ನಾಟಕ ನೀಡುವ 1 ರೂ. ತೆರಿಗೆಯಲ್ಲಿ ಮೋದಿ ಸರಕಾರ ವಾಪಸ್‌ ನೀಡುವುದು ಜುಜುಬಿ 35 ಪೈಸೆ. ಆದರೆ ಉತ್ತರ ಪ್ರದೇಶ ನೀಡುವ 1 ರೂ. ಬದಲಾಗಿ ಮೋದಿ ಸರಕಾರ ವಾಪಸ್‌ ನೀಡುವುದು 2.73 ರೂಪಾಯಿ! ಕರ್ನಾಟಕ ವಿರೋಧಿ ಮೋದಿ ಸರಕಾರ ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ’ ಎಂದು ಸಿಟ್ಟು ಹೊರಹಾಕಿದ್ದಾರೆ.

14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡಿದ್ದ ಪಾಲು ಶೇ.4.72ರಷ್ಟು. 15ನೇ ಹಣಕಾಸು ಆಯೋಗದಲ್ಲಿ ಮೋದಿ ನೀಡಿದ ಪಾಲು ಶೇ.3.64ರಷ್ಟು ರಾಜ್ಯಕ್ಕಾದ ಅನ್ಯಾಯ ಬರೋಬ್ಬರಿ 45 ಸಾವಿರ ಕೋಟಿ ರೂ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಆಸ್ಟ್ರೇಲಿಯಾದಲ್ಲಿ ಅದಾನಿ ಗಣಿಗಾರಿಕೆ ಮಾಡಲು ಆರ್‌ಬಿಐಯಿಂದ ಪ್ರಧಾನಿ ಮೋದಿ 4,000 ಕೋಟಿ ಸಾಲ ಕೊಡಿಸುತ್ತಾರೆ. ನಮ್ಮ ಕರ್ನಾಟಕದ ನ್ಯಾಯಯುತ ಜಿಎಸ್‌ಟಿ ಪಾಲು ಕೊಡುವುದಿಲ್ಲ ಯಾಕೆ’ ಎಂದು ಪ್ರಶ್ನಿಸಿದ್ದಾರೆ.

Advertisement

ನಾವು ದುಡಿದು ಉತ್ತರ ಭಾರತದ ರಾಜ್ಯಗಳನ್ನು ಸಾಕಬೇಕಾಗಿದೆ
ಕರ್ನಾಟಕದಿಂದ ಸಂಗ್ರಹಿಸುತ್ತಿರುವ ತೆರಿಗೆ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಬಹುಪಾಲು ಹಂಚಿಕೆ ಮಾಡುತ್ತಿದ್ದು, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಉತ್ತರ ಭಾರತದ ರಾಜ್ಯಗಳಿಗೆ ಲಕ್ಷಾಂತರ ಕೋಟಿ ರೂ. ಖರ್ಚು ಮಾಡಿದ್ದರೂ ಅಭಿವೃದ್ಧಿಯಾಗಿಲ್ಲ. ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರಕಾರ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದು, ನಾವು ದುಡಿದು ಉತ್ತರ ಭಾರತದವರನ್ನು ಸಾಕುವಂತಾಗಿದೆ ಎಂದು ಕಿಡಿಕಾರಿದ್ದಾರೆ.

“ಬೇರೆ ರಾಜ್ಯದ ಜನ ತಮ್ಮ ಜನಸಂಖ್ಯೆ ಕಡಿಮೆ ಮಾಡುವಲ್ಲಿ ವಿಫಲವಾದರೆ ಅದರ ಶಿಕ್ಷೆ ನಮ್ಮ ರಾಜ್ಯಕ್ಕೆ ಯಾಕೆ? 15ನೆಯ ಹಣಕಾಸು ಆಯೋಗವನ್ನು ರದ್ದು ಮಾಡಿ. ಜನಸಂಖ್ಯೆ ಆಧಾರದಲ್ಲಿ ತೆರಿಗೆ ಹಂಚುವುದನ್ನು ನಿಲ್ಲಿಸಿ. ನಮ್ಮ ರಾಜ್ಯದ ತೆರಿಗೆ ನಮ್ಮ ರಾಜ್ಯಕ್ಕೆ ಮಾತ್ರ ಬಳಕೆ ಆಗಬೇಕು’ ಎಂದು ಎಕ್ಸ್‌ ಬಳಕೆದಾರ ಚೇತನ್‌ ಆಗ್ರಹಿಸಿದ್ದಾರೆ.

ಉತ್ತರದವರನ್ನು ನಾವು ಸಾಕಬೇಕಾ?
ಕನ್ನಡಿಗ ಸಾಗರ್‌ ರವಿನಾಥ್‌ ಎಂಬ ವರು ಟ್ವೀಟ್‌ ಮಾಡಿ, ನಮ್ಮ ರಾಜ್ಯದಿಂದ ಸಂಸದರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಇದೇನಾ? ನಮ್ಮ ತೆರಿಗೆ ಹಣ ನಮ್ಮ ರಾಜ್ಯಕ್ಕೆ ಸರಿಯಾದ ಪಾಲು ಕೊಡಲಿ. ಉತ್ತರ ಭಾರತದವರನ್ನು ಸಾಕಿ ಸಲಹೋಕಾ ನಾವು ಒಕ್ಕೂಟ ಸೇರಿದ್ದು’ ಎಂದು ಪ್ರಶ್ನೆ ಮಾಡಿದ್ದಾರೆ.

ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ: ಸಿಎಂ
ತೆರಿಗೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಜಾಲತಾಣದಲ್ಲಿ ಕನ್ನಡಿಗರು ನಡೆಸಿರುವ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ನೀಡಿದ್ದು, ನೆಟ್ಟಿಗರಿಗೆ ಆನೆ ಬಲ ಬಂದಿದೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸಒಓಉರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕನ್ನಡಿಗರು ನಡೆಸುತ್ತಿರುವ “ನನ್ನ ತೆರಿಗೆ ನನ್ನಹಕ್ಕು’ ಟ್ವಿಟ್ಟರ್‌ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ ಎಂದು ಕುಟುಕಿದ್ದಾರೆ.

ನಮ್ಮೆಲ್ಲರ ಧ್ವನಿ ದಿಲ್ಲಿವರೆಗೆ ಕೇಳುವುದು ಶತಸಿದ್ಧ: ಸಿದ್ದು
ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯ ಗಳು ಎಂದಿಗೂ ನಮಗೆ ಮಾದರಿ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾ ಟಕವೇ ಭಾರತಕ್ಕೆ ಮಾಡೆಲ್‌. ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿ ಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು ಎಂದಿದ್ದಾರೆ. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ ಕೇಳುವುದು ಶತಸಿದ್ಧ ಎಂದು ಸಿಎಂ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next