Advertisement

ರಾಜಕೀಯ ದಾಳವಾದ ಮೈಶುಗರ್‌ ಕಾರ್ಖಾನೆ

12:13 AM Feb 16, 2023 | Team Udayavani |

ಮಂಡ್ಯ: ಮೈಶುಗರ್‌ ಕಾರ್ಖಾನೆಗೆ ಇಡೀ ದೇಶದ ಮೊದಲ ಹಾಗೂ ಏಕೈಕ ಸರಕಾರಿ ಸ್ವಾಮ್ಯದ ಕಾರ್ಖಾನೆ ಎಂಬ ಹೆಗ್ಗಳಿಕೆ ಇದೆ.  ಆದರೆ ಕಳೆದ ಹತ್ತು ವರ್ಷ­ಗಳಿಂದ ರೋಗಗ್ರಸ್ಥ­ವಾಗಿದ್ದು, ಬರುವ ಸರಕಾರಗಳು, ಜನ­ಪ್ರತಿ­ನಿಧಿಗಳು ರಾಜಕೀಯಕ್ಕಾಗಿ ಬಳಸಿಕೊಂಡಿದ್ದೇ ಹೆಚ್ಚು.

Advertisement

ಕಾರ್ಖಾನೆಯ ವಿಚಾರ ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಹತ್ತು ವರ್ಷಗಳ ಹಿಂದೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿತ್ತು. ಅನಂತರ ಕಾರ್ಖಾನೆಯಲ್ಲಿನ ದುರಾಡಳಿತ, ಅಧಿಕಾರಿಗಳ ನಿರ್ಲಕ್ಷ್ಯ, ಕಾರ್ಮಿಕರಲ್ಲಿ ಗುಂಪುಗಾರಿಕೆ, ರಾಜಕೀಯದಿಂದ ಕಾರ್ಖಾ­ನೆಯು ಅರಾಜಕತೆಯತ್ತ ಸಾಗಿತು.

500 ಕೋಟಿ ರೂ. ಹೆಚ್ಚು: ಕಾರ್ಖಾನೆಗೆ 500 ಕೋಟಿ ರೂ. ಹೆಚ್ಚು ಅನುದಾನ ನೀಡಿದರೂ ಅಧಿಕಾರಿಗಳ ಬೇಜವಾಬ್ದಾರಿತನ, ಆಡಳಿತ ವೈಫಲ್ಯದಿಂದ ಅನುದಾನ ಸರಿಯಾಗಿ ಸದ್ಬಳಕೆಯಾಗಲೇ ಇಲ್ಲ. ಅಲ್ಲದೆ ಅನುದಾನ ಕಾರ್ಖಾನೆಗೆ ಸಮರ್ಪಕವಾಗಿ ಬಳಕೆಯಾಗಿ­ದೆಯೇ ಇಲ್ಲವೋ ಎಂಬ ಮಾಹಿತಿಯೂ ಇಲ್ಲ.

ಒಅಂಡ್‌ಎಂಗೆ ವಹಿಸಲು ನಿರ್ಧಾರ: 2013ರ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕಾರ್ಖಾನೆ ಚಾಲನೆಗೊಂಡಿತು. ಬಳಿಕ ಬಂದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೊಸ ಕಾರ್ಖಾನೆ ಸ್ಥಾಪನೆ ಹಾಗೂ ಈಗಿರುವ ಕಾರ್ಖಾನೆಯನ್ನು ಒ ಅಂಡ್‌ ಎಂಗೆ ವಹಿಸಲು ನಿರ್ಧರಿ­ಸಿದ್ದರು. ಅಲ್ಲದೆ ಹೊಸ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಬಜೆಟ್‌ನಲ್ಲಿ 400 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಕಾರ್ಯಗತವಾಗಲಿಲ್ಲ,

2019ರಿಂದ ಸ್ಥಗಿತಗೊಂಡ ಕಾರ್ಖಾನೆ: ರಾಜಕೀಯ ಸ್ಥಿತ್ಯಂತರ ಗಳ ನಡುವೆ ಕಾರ್ಖಾನೆಯು ಸ್ಥಗಿತಗೊಂಡಿತು. ಇದರಿಂದ ಈ ಭಾಗದ ರೈತರು ಸಂಕಷ್ಟ ಅನುಭವಿಸುವಂತಾಯಿತು. ಆರ್ಥಿಕ ಚಟುವಟಿಕೆಗಳು ಕುಸಿಯಿತು. ರೈತರು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಹರಸಾಹಸಪಡುವಂತಾ­ಯಿತು. ಜಿಲ್ಲೆಯ ವಿವಿಧ ಖಾಸಗಿ ಕಾರ್ಖಾನೆಗಳು ಮೈಶುಗರ್‌ ವ್ಯಾಪ್ತಿಯ ಕಬ್ಬು ಕಟಾವು ಮಾಡಿಕೊಳ್ಳಲು ಮುಗಿಬಿದ್ದವು. ಆದರೂ ಪ್ರಭಾವ ಬೀರಿದ ರೈತರ ಕಬ್ಬು ಕಟಾವಾದರೆ ಸಾಮಾನ್ಯ ರೈತರ ಕಬ್ಬು ಗದ್ದೆಯಲ್ಲಿಯೇ ಉಳಿಯುವಂತಾಯಿತು.

Advertisement

ಖಾಸಗಿಗೆ ಗುತ್ತಿಗೆ ನೀಡಲು ಮುಂದಾದ ಬಿಜೆಪಿ ಸರಕಾರ: 2019ರಲ್ಲಿ ಬಂದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರಕಾರ ಕಾರ್ಖಾನೆಯನ್ನು ಮೊದಲು ಒ ಅಂಡ್‌ ಎಂಗೆ ವಹಿಸಲು ಮುಂದಾಗಿತ್ತು. ಇದರ ವಿರುದ್ಧ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ಒ ಅಂಡ್‌ ಎಂ ಕೈಬಿಟ್ಟು ಪಿಎಸ್‌ಎಸ್‌ಕೆ ಕಾರ್ಖಾನೆ ಮಾದರಿಯಲ್ಲಿ 40 ವರ್ಷಗಳ ಕಾಲ ಖಾಸಗಿಯವರಿಗೆ ಗುತ್ತಿಗೆ ನೀಡಲು ಮುಂದಾಗಿತ್ತು.

ಬಣಗಳಾಗಿ ಪರ-ವಿರೋಧ ಹೋರಾಟ: ಕಾರ್ಖಾನೆ ಯನ್ನು ಸರಕಾರವೇ ನಡೆಸಬೇಕೋ ಅಥವಾ ಒ ಅಂಡ್‌ ಎಂಗೆ ನೀಡಬೇಕೋ ಎಂಬ ವಿಚಾರದಲ್ಲಿ ಬಣ ಸೃಷ್ಟಿಯಾಯಿತು. ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾ ಗಿದ್ದ ಡಾ| ಜಿ.ಮಾದೇಗೌಡ ನೇತೃತ್ವದಲ್ಲಿ ಒಂದು ಬಣ ಸರಕಾರಿ ಸ್ವಾಮ್ಯದಲ್ಲಿರಲಿ ಎಂದು ಹೋರಾಟ ಮಾಡಿದರೆ ಸಮಿತಿಯ ಖಜಾಂಚಿಯಾಗಿದ್ದ ಡಾ| ಎಚ್‌. ಡಿ.ಚೌಡಯ್ಯ ನೇತೃತ್ವದ ಬಣ ಒ ಅಂಡ್‌ ಎಂ ಗೆ ನೀಡಬೇಕು ಎಂದು  ಪಟ್ಟು ಹಿಡಿದು ಪ್ರತಿಭಟನೆ ನಡೆಸಿದವು.

ಗೊಂದಲದಿಂದ ಹೊರಬರಲು ಸರಕಾರ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಗೆ ವಹಿಸಿ ಅಧಿಸೂಚನೆ ಹೊರಡಿಸಿತು. ಇದಾದ ಮೇಲೆ ಹೋರಾಟಗಾರರು ಒಂದಾಗಿ ಸರಕಾರದ ವಿರುದ್ಧ ಒಂದು ತಿಂಗಳ ಕಾಲ ಅನಿರ್ದಿಷ್ಟಾವಧಿ ಹೋರಾಟ ನಡೆಸಿದರು. ಬಳಿಕ ಸರಕಾರ ತನ್ನ ನಿರ್ಧಾರ ವಾಪಸ್‌ ಪಡೆಯಿತು.

ತರಾತುರಿಯಲ್ಲಿ ಆರಂಭ: 2022ರಲ್ಲಿ ಹೋರಾಟಗಾರರ ಒತ್ತಡದಿಂದ ತರಾತುರಿಯಲ್ಲಿ ಆರಂಭಿಸಿತು. ಹೀಗಾಗಿ ಕಾರ್ಖಾನೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿವೆ. ಕಳೆದ 5 ತಿಂಗ ಳಲ್ಲಿ ಕೇವಲ 1.10 ಲಕ್ಷ ಟನ್‌ ಕಬ್ಬು ಮಾತ್ರ ಅರೆದಿದ್ದು, 30 ಸಾವಿರ ರೂ. ಮೌಲ್ಯದ ಕಳಪೆ ಸಕ್ಕರೆ ಉತ್ಪಾದನೆ ಮಾಡಿದೆ.

ಕಾರ್ಖಾನೆ ಸ್ಥಗಿತ: ಐದು ತಿಂಗಳ ಕಾಲ ಕುಂಟುತ್ತಾ ಸಾಗಿದ ಕಾರ್ಖಾನೆ ಜನವರಿಯಲ್ಲಿ ಪ್ರಸ್ತುತ ವರ್ಷದ ಹಿಂಗಾರು ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿತು. ಮುಂದಿನ ವರ್ಷದಿಂದ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು, ದಿನ 5 ಸಾವಿರ ಟನ್‌ ಕಬ್ಬು ಪ್ರತೀದಿನ ಅರೆಯುವ ಸಾಮರ್ಥ್ಯ ವನ್ನು ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಖಾನೆಯ ಕ್ರೆಡಿಟ್‌ ಪಡೆಯಲು ಪೈಪೋಟಿ
ಪ್ರಸ್ತುತ ಮೈಶುಗರ್‌ ಕಾರ್ಖಾನೆಯೇ ರಾಜಕೀಯ ಪಕ್ಷಗಳಿಗೆ ದಾಳವಾಗಿ ಸಿಕ್ಕಿದೆ. ಬಿಜೆಪಿ ಸರಕಾರ ಕಾರ್ಖಾನೆಯನ್ನು ನಾವೇ ಆರಂಭಿಸಿದ್ದು ಎಂದು ಹೇಳಿ ಕೊಳ್ಳುತ್ತಿದ್ದರೆ ಅತ್ತ ಕಾಂಗ್ರೆಸ್‌ ಹೋರಾಟಗಾರರಿಗೆ ನಾವೂ ಬೆಂಬಲ ಕೊಟ್ಟಿದ್ದೆವು. ಅಲ್ಲದೆ ಸರಕಾರದ ಮಟ್ಟದಲ್ಲಿ ನಮ್ಮ ನಾಯಕರು ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ಅತ್ತ ಸಂಸದೆ ಸುಮಲತಾ, ಕಾರ್ಖಾನೆಯನ್ನು ಆರಂಭಿಸಲು ನಾನು ಸಿಎಂ, ಸಚಿವರು, ಕೇಂದ್ರ ಸಚಿವರ ಜತೆ ಚರ್ಚಿಸಿ ಒತ್ತಡ ತಂದಿದ್ದೆ ಎಂದಿದ್ದಾರೆ. ಸದನದಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು ಧ್ವನಿ ಎತ್ತಿದ್ದರು. ಮಳವಳ್ಳಿಯಿಂದ ಪಾದಯಾತ್ರೆ ನಡೆಸಿದ್ದರಿಂದ ಆರಂಭಿಸಲಾಗಿದೆ ಎನ್ನುತ್ತಿದ್ದಾರೆ.

ಮೈಶುಗರ್‌ ಹೆಸರು ಹೇಳದೆ ಮಾತು ಮುಗಿಯುತ್ತಿಲ್ಲ
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಮೈಶುಗರ್‌ ಕಾರ್ಖಾನೆಯ ಹೆಸರು ಹೇಳದೆ ಮಾತು ಮುಗಿಸುತ್ತಿಲ್ಲ ಎಂಬಂತಾಗಿದೆ. ಇತ್ತೀಚೆಗೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದಾಗಲೂ ಮೈಶುಗರ್‌ ಕಾರ್ಖಾನೆ ಆರಂಭಿಸಿದ್ದು ನಾವು ಎಂದಿದ್ದರು. ಅನಂತರ ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಕೂಡ ನಾವು ಅಧಿಕಾರಕ್ಕೆ ಬಂದರೆ ಮೈಶುಗರ್‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಾಗಿ ಹೇಳಿದರು. ಜೆಡಿಎಸ್‌ನ ಪಂಚರತ್ನ ರಥಯಾತ್ರೆಯಲ್ಲೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾವಿಸಿದ್ದರು.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next