ಮಾಲೂರು: ತನ್ನ ಮೇಲೆ ವಿಶ್ವಾಸವಿಟ್ಟು, ಶಾಸಕನಾಗಿ ಮಾಡಿದ್ದಕ್ಕೆ ಧಕ್ಕೆ ಬರದಂತೆ ತಾಲೂಕಿನ ಅಭಿವೃದ್ಧಿ ಪಡಿಸುವ ಗುರಿ ಹೊಂದಿರುವುದಾಗಿ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಹೋಂಡಾ ಕ್ರೀಡಾಂಗಣದಲ್ಲಿ ತಾಲೂಕು ಅಡಳಿತ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ವಿಶೇಷ ಅನುದಾನ ತರುವಲ್ಲಿ ಸಫಲನಾಗಿದ್ದೇನೆ. ಇಷ್ಟು ಅನುದಾನ ಕ್ಷೇತ್ರದ ಇತಿಹಾಸದಲ್ಲೇ ಯಾರೂ ತಂದಿರಲಿಲ್ಲ ಎಂದರು.
ತಾವು ಕೋಚಿಮಲ್ ನಿರ್ದೇಶಕರಾಗುವ ವೇಳೆಯಲ್ಲಿ ತಾಲೂಕಿನಲ್ಲಿ ಕೇವಲ 23 ಬಿಎಂಸಿಗಳಿದ್ದು, ಪ್ರಸ್ತುತ 42 ಕಾರ್ಯನಿರ್ವಹಿಸುತ್ತಿವೆ. ಕೋಲಾರ ಹಾಲು ಒಕ್ಕೂಟದಲ್ಲಿ ವಿಶೇಷ ಸ್ಥಾನ ಹೊಂದಿರುವ ತಾಲೂಕು ಹಾಲು ಉತ್ಪಾದನೆ, ಗುಣಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು. ಶೈಕ್ಷಣಿಕ ಉತ್ತೇಜನಕ್ಕಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಬಿಡುಗಡೆ ಮಾಡಿಸಿದ್ದು, ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುತ್ತಿರುವ ಜೊತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗಾಗಿ 4.25 ಕೋಟಿ ರೂ. ಬಿಡುಗಡೆ ಮಾಡಿಸಿರುವುದಾಗಿ ತಿಳಿಸಿದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 1850 ವಿದ್ಯಾರ್ಥಿಗಳ ಜೊತೆಗೆ ಮುಂದಿನ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಲೇಜಿನಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿರುವ ಜೊತೆಗೆ ಬಸ್‌ನಿಲ್ದಾಣದಿಂದ ಕಾಲೇಜಿನವರೆಗೂ ಸಾರಿಗೆ ಬಸ್‌ನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಶೀಘ್ರ ನಿವೇಶನ: ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಪ್ರಥಮ ಹಂತವಾಗಿ 6.25 ಕೋಟಿ ರೂ., 2ನೇ ಹಂತವಾಗಿ 8 ಕೋಟಿ ರೂ., ಪ್ರಸ್ತುತ 2 ಕೋಟಿ ರೂ. ಬಿಡುಗಡೆ ಮಾಡಿಸಿದ್ದು, ಮಾದರಿ ಪಟ್ಟಣ ಮಾಡುವ ಗುರಿ ಹೊಂದಲಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. 16 ವರ್ಷಗಳಿಂದ ಪುರಸಭೆ ನಿವೇಶನಕ್ಕೆ ಹಣ ಸಂದಾಯ ಮಾಡಿ, ಕಾಯುತ್ತಿರುವ ಫಲಾನುಭವಿಗಳಿಗೆ ಶೀಘ್ರ ನಿವೇಶನ ನೀಡುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದೊಂದಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಭವನಗಳ ನಿರ್ಮಾಣ: ತಾಲೂಕಿನ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಅಗತ್ಯ ಸೌಲಭ್ಯ, ಪ್ರೋತ್ಸಾಹ ನೀಡುತ್ತಿರುವ ಜೊತೆಗೆ ಅನುಸೂಚಿತ ಜಾತಿ, ಪಂಗಡಗಳಿಗೆ ಅಗತ್ಯವಾಗಿರುವ ಸಮುದಾಯ ಭವನಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಎಂದರು.
ಅರಿವು ಮೂಡಿಸಿ: ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ತಹಶೀಲ್ದಾರ್ ವಿ.ನಾಗರಾಜು ಮಾತನಾಡಿ, ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಅದು ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಾಗಿದೆ. ಇಂದಿನ ಯುವ ಸಮೂಹಕ್ಕೆ ಈ ಬಗ್ಗೆ ಅರಿವು ಮೂಡಬೇಕಾಗಿದೆ ಎಂದರು. ತಾಪಂ ಅಧ್ಯಕ್ಷೆ ತ್ರಿವರ್ಣರವಿ, ಉಪಾಧ್ಯಕ್ಷೆ ನಾಗವೇಣಿ, ಇಒ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರಸಾದ್, ಬಿಇಒ ಮಾಧವರೆಡ್ಡಿ, ಪ್ರಾಂಶುಪಾಲರಾದ ರವಿಕುಮಾರ್, ನಾರಾಯಣಪ್ಪ, ಕೇಶವರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ ಇತರರಿದ್ದರು. ವಿದ್ಯಾರ್ಥಿಗಳಿಂದ ನೃತ್ಯ, ಪೊಲೀಸ್ ಇಲಾಖೆ, ಗೃಹ ರಕ್ಷಕ ಇಲಾಖೆ, ಎನ್‌ಸಿಸಿ, ಸೇವಾದಳ, ಸ್ಕೌಟ್ಸ್, ಗೈಡ್ಸ್ ತಂಡಗಳಿಂದ ಅಕರ್ಷಕ ಪಥ ಸಂಚಲನ ನಡೆಯಿತು.