Advertisement

ನನ್ನ ರಾಜಕೀಯ ಜೀವನದಲ್ಲಿ ಅಸಮಾಧಾನವೇ ಹೆಚ್ಚು

12:34 PM Sep 15, 2017 | |

ಹುಬ್ಬಳ್ಳಿ: ನಲವತ್ತು ವರ್ಷಗಳ ಕಾಲ ರಾಜಕಾರಣದಲ್ಲಿ ಕೊಳೆತಿದ್ದೇನೆ. ಸಾಕಷ್ಟು ಏಟು ತಿಂದಿದ್ದೇನೆ. ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. 1978ರಲ್ಲಿ ವಿಧಾನಸೌಧಕ್ಕೆ ಕಾಲಿಟ್ಟಿನೋ, ಅಂದಿನಿಂದ ಇಂದಿನವರೆಗೂ ರಾಜಕೀಯ ಜೀವನದಲ್ಲಿ ಸಮಾಧಾನಕ್ಕಿಂತ ಅಸಮಾಧಾನವೇ ಹೆಚ್ಚು ಎಂದು ಆರೋಗ್ಯ ಸಚಿವ ರಮೇಶಕುಮಾರ ಹೇಳಿದರು. 

Advertisement

ಹುಬ್ಬಳ್ಳಿ ಕವಿಬಳಗ ಜೆ.ಸಿ. ನಗರದ ನೌಕರರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ| ಗೋವಿಂದ ಮಣ್ಣೂರ ಅವರ “ಸದಾ ಸ್ಮರಣೀಯರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವ ಸಂಗತಿಯಲ್ಲೂ ಖುಷಿಯ ವಾತಾವರಣವಿಲ್ಲ. ಆದರೆ, ನನ್ನ ಮೇಲೆ ವಿಶ್ವಾಸವಿಟ್ಟ ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ.

ಜನರು ನಮ್ಮ ವರ್ತನೆ, ಹೇಳಿಕೆ ಗಮನಿಸುತ್ತಿರುತ್ತಾರೆ. ನನ್ನ ಬಗ್ಗೆ ಕೂಡ ಸಾಕಷ್ಟು ಆರೋಪ ಮಾಡುತ್ತಾರೆ. ಒಂದು ಆರೋಪ ಸಾಬೀತಾದರೂ ಸಾರ್ವಜನಿಕರಿಗೆ ಮುಖ ತೋರಿಸುವುದಿಲ್ಲ ಎಂದು ಹೇಳಿದರು. ಜಾತಿ, ಧರ್ಮ ಆಧರಿಸಿ ಜನರ ಮಧ್ಯೆ ಕಲಹ ಮಾಡಿಸಿ ರಕ್ತದೋಕುಳಿ ಹರಿಸುವುದು ಅಕ್ಷಮ್ಯ ಅಪರಾಧ.

ಸದಾ ಒಳ್ಳೆಯತನಕ್ಕೆ ನಮ್ಮ ಪ್ರೋತ್ಸಾಹ ಇರಬೇಕು. ಮಾನವತಾವಾದಿಗಳಾಗಿ ಬದುಕಬೇಕು. ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ ರಾಮನ ಮೇಲೆ ನನಗಂತೂ ಸಿಟ್ಟಿದೆ. ಆದರೆ, ತಂದೆ ಮಾತಿನಂತೆ ಸಿಂಹಾಸನವೇರುವುದನ್ನು ಬಿಟ್ಟು ನಾರುಡುಗೆ ತೊಟ್ಟು ಕಾಡಿಗೆ ಹೋದ ರಾಮ ಆದರ್ಶ. ರಾವಣ ಹಾಗೂ ದುರ್ಯೋಧನ ಸಂಪೂರ್ಣ ಕೆಟ್ಟವರಾಗಿರಲಿಲ್ಲ.

ಅವರಲ್ಲಿಯೂ ಹಲವು ಒಳ್ಳೆ ಗುಣಗಳಿದ್ದವು ಎಂದರು. ಜ್ಞಾನ, ನಿಸ್ವಾರ್ಥ, ನಿಷ್ಕಲ್ಮಷ ಪ್ರೀತಿ ಇರುವವರು ಸದಾ ಸ್ಮರಣೀಯರು. ಇಂಥವರ ಬಗ್ಗೆ ಡಾ| ಗೋವಿಂದ ಮಣ್ಣೂರ ಕೃತಿ ಬರೆದಿದ್ದು ಖುಷಿ ನೀಡಿದೆ. ಇತರರ ನೆಮ್ಮದಿ ಹಾಳು ಮಾಡುವವರು, ಬೇರೆಯವರ ಒಡವೆಗೆ ಆಸೆ ಪಡುವವರು, ಸ್ವಾರ್ಥಿಗಳು, ನಾಚಿಕೆ ಬಿಟ್ಟವರ ಬಗ್ಗೆಯೂ ಮಣ್ಣೂರ ಅವರು ಬರೆಯಬೇಕು ಎಂದು ಹೇಳಿದರು. 

Advertisement

ಶ್ರದ್ಧೆ, ಶ್ರಾದ್ಧ, ಶ್ರದ್ಧಾಂಜಲಿ ಇವು ಪೂರಕ ಶಬ್ದಗಳು. ಶ್ರದ್ಧೆಯಿಲ್ಲದೇ ಶ್ರಾದ್ಧ ಮಾಡಿದರೆ ಯಾವ ಫ‌ಲವೂ ಸಿಗುವುದಿಲ್ಲ. ತಂದೆ-ತಾಯಿ ಬದುಕಿದ್ದಾಗ ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು, ಸತ್ತಮೇಲೆ ನೀರು ಬಿಟ್ಟರೆ ಪುಣ್ಯ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು. 

ಮನೋಜ ಪಾಟೀಲ ಕೃತಿ ಪರಿಚಯಿಸಿ ಮಾತನಾಡಿ, “ಸದಾ ಸ್ಮರಣೀಯರು’ ಕೃತಿ ಉತ್ತರ ಕರ್ನಾಟಕದ ಪರಿಚಯ ಪತ್ರವಿದ್ದಂತೆ. ಸಂಯುಕ್ತ ಕರ್ನಾಟಕದಲ್ಲಿ ಬರೆದ ವ್ಯಕ್ತಿ ಪರಿಚಯ ಲೇಖನಗಳನ್ನು ಕೃತಿಯಾಗಿಸಲಾಗಿದೆ. ಇದನ್ನು ಉತ್ತರ ಕರ್ನಾಟಕದ ಮಾಹಿತಿ ಕೋಶ ಎಂದು ಕರೆಯಬಹುದಾಗಿದೆ ಎಂದು ಹೇಳಿದರು. ಕೃತಿಕಾರ ಡಾ| ಗೋವಿಂದ ಮಣ್ಣೂರ ಪ್ರಾಸ್ತಾವಿಕ ಮಾತನಾಡಿದರು.

ಲೋಕಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಉಮೇಶ ಭಟ್‌, ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ ಮಾತನಾಡಿದರು. ಮಾಜಿ ಸಂಸದ ಐ.ಜಿ. ಸನದಿ, ಸದಾನಂದ ಡಂಗನವರ, ಚಂದ್ರಶೇಖರ ಅಳಗುಂಡಗಿ ಇದ್ದರು. ಸುಜಾತಾ ಗುರವ ಪ್ರಾರ್ಥಿಸಿದರು. ಲೋಕಮಾನ್ಯ ರಾಮದತ್‌ ಸ್ವಾಗತಿಸಿದರು. ಆರತಿ ನಿರೂಪಿಸಿದರು. ಅಮರೇಶ ಹಿಪ್ಪರಗಿ ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next