ಒಮ್ಮೆ ನೆಗೆದರೆ, ಆಕಾಶ ಮುಟ್ಟಿದ ಅನುಭವ. ಇಲ್ಲಿ ನಿಮ್ಮ ಕಾಲು ನೀವು ಹೇಳಿದ ಹಾಗೆ ಕೇಳ್ಳೋದಿಲ್ಲ. ಎಷ್ಟೋ ಎತ್ತರವನ್ನು ತಲುಪಿ, ಪುನಃ ಬಂದು ಕೆಳಕ್ಕೆ ಬೀಳುತ್ತೀರಿ. ಆದ್ರೂ ನಿಮ್ಗೆ ಪೆಟ್ಟಾಗೋದಿಲ್ಲ! ಸರಿಯಾಗಿ ಹೆಜ್ಜೆಯೂರಿ ನಿಲ್ಲಲೂ ಆಗೋದಿಲ್ಲ. ಯಾಕೆ ಗೊತ್ತಾ? ನೀವು ಮತ್ತೆ ಮತ್ತೆ ಮೇಲೆ ನೆಗೆಯುತ್ತಿರ್ತೀರಿ…
“ಬಾಹುಬಲಿ’ಯಲ್ಲಿ ಪ್ರಭಾಸ್ ಜಲಪಾತ ಹತ್ತಿದಂತೆ ಆಗುವ ಈ ಅನುಭವ ಸಿಗಬೇಕಾದ್ರೆ ಎಲೆಕ್ಟ್ರಾನ್ ಸಿಟಿಯ ಪ್ಲೇ ಫ್ಯಾಕ್ಟರಿಗೆ ಹೋಗ್ಬೇಕು. ಅಲ್ಲಿ ಮೈದಾನದ ಮಾದರಿಯ ಟ್ರಾಂಪೊಲಿನ್ ಸ್ಪೇಸ್‌ನಲ್ಲಿ ನೀವು ಆಡಿದ್ದೇ ಆಟ. ಟ್ರಾಂಪೊಲಿನ್ ಮೇಲೆ ಒಮ್ಮೆ ನೆಗೆದರೆ, ಮತ್ತೆ ಮತ್ತೆ ಚೆಂಡು ಪುಟಿದಂತೆ ನಿಮ್ಮ ಬಿಂದಾಸ್ ಖುಷಿಯನ್ನು ಅನುಭವಿಸಬಹುದು. ಇತರೆ ಆಟಗಳನ್ನೂ ಆಡಬಹುದು.
ಏಷ್ಯಾದ ಎರಡನೆಯ, ಭಾರತದ ಮೊದಲನೆಯ ಅತಿದೊಡ್ಡ ಪ್ಲೇ ಸ್ಟೋರ್ ಇದಾಗಿದೆ. ನೆಲದ ಮೇಲೆ ಹಾಸಿರುವ ಸಾಫ್ಟ್ ಪ್ಯಾಡ್ ಮೇಲೆ ನೀವೆಷ್ಟೇ ಎತ್ತರಿಂದ ಬಿದ್ದರೂ ಏಟಾಗುವುದಿಲ್ಲ. ಒಂದು ಸ್ವಲ್ಪವೂ ಮೈಕೈ ನೋವಾಗುವುದಿಲ್ಲ.
ಈ ಮಾದರಿಯ ಆಟಗಳ ಬಗ್ಗೆ ನಾಸಾದ ವಿಜ್ಞಾನಿಗಳೇ ಹೇಳಿದಂತೆ, “ಟ್ರಾಂಪೊಲಿನ್ ಮೇಲೆ 10 ನಿಮಿಷ ಕುಣಿಯುವುದು, 30 ನಿಮಿಷ ರನ್ನಿಂಗ್ ಮಾಡುವುದಕ್ಕೆ ಸಮ’! ಆಟ ಆಡಿ ಮಜಾ ಅನುಭವಿಸಲು, ದಪ್ಪಗೆ ಇದ್ದವರು ಕ್ಯಾಲೊರಿ ಕರಗಿಸಿಕೊಂಡು, ಬೊಜ್ಜು ಮಾಯ ಆಗಿಸಿಕೊಳ್ಳಲೂ ಇದು ನೆರವಾಗುವ ತಾಣ. ಥೇಟ್ ಸ್ಪ್ರಿಂಗ್ ಮೇಲೆ ಬಿದ್ದು ಜಿಗಿದಂತೆ ಫೀಲ್ ಆಗುವ ಈ ಪ್ಯಾಡ್ ಮೇಲೆ ನೀವು ಹಕ್ಕಿಯೇ ಆಗುತ್ತೀರಿ.
ಇನ್‌ಡೋರ್ ಸ್ಟೇಡಿಯಂ ರೀತಿಯೇ ಇರುವ ಪ್ಲೇ ಫ್ಯಾಕ್ಟರಿಯಲ್ಲಿ ಹಲವು ಕೋಣೆಯ ಮಾದರಿಯ ಬಾಕ್ಸ್‌ಗಳನ್ನು ನಿರ್ಮಿಸಲಾಗಿದೆ. ಸಾಹಸದ ಮಾದರಿಯಲ್ಲಿ ಎಲ್ಲ ರೀತಿಯ ಆಟಗಳನ್ನೂ ಇಲ್ಲಿ ಆಡಬಹುದು. ಪ್ರಭಾಸ್, ಜಾಕೀಚಾನ್‌ನಂತೆ ಜಂಪ್ ಮಾಡೋದಷ್ಟೇ ಅಲ್ಲ, ಕೊಹ್ಲಿ ರೀತಿ ಇಲ್ಲಿ ಡೈ ಬೀಳಬಹುದು! ಮೆಸ್ಸಿಯಂತೆಯೂ ಜಿಗಿಯಬಹುದು! ಯಾಕೆ ಗೊತ್ತಾ? ಇಲ್ಲಿ ಇನ್‌ಡೋರ್ ಕ್ರಿಕೆಟ್, ಇನ್‌ಡೋರ್ ಫುಟ್ಬಾಲ್ ಆಡಲೂ ವ್ಯವಸ್ಥೆಯಿದೆ. ಬಾಸ್ಕೇಟ್ ಬಾಲ್, ಕಬಡ್ಡಿಯನ್ನೂ ಇಲ್ಲಿ ಆಡಿ ನಲಿಯಬಹುದು.
ಇನ್ನೂ ಅನೇಕರು ಇಲ್ಲಿ ಜಿಗಿಯುತ್ತಲೇ ಸೆಲ್ಫಿ ವಿಡಿಯೋ ತೆಗೆದುಕೊಳ್ತಾರೆ. ಒಟ್ಟಿನಲ್ಲಿ ಪ್ಲೇ ಫ್ಯಾಕ್ಟರಿ ಮಕ್ಕಳು ಸೇರಿದಂತೆ ಎಲ್ಲ ವರ್ಗದವರಿಗೆ ಮನರಂಜನೆ ಪೂರೈಸುವ ಮೈದಾನವಂತೂ ಹೌದು.
ಎಲ್ಲಿದೆ?: 7, ಸರ್ವೀಸ್ ರಸ್ತೆ, ಪ್ರಗತಿ ನಗರ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ
ಸಂಪರ್ಕ: 080ಧಿ- 28528555
ಜಾಲತಾಣ: //www.myplayfactory.com
ಫೇಸ್‌ಬುಕ್:https://www.facebook.com/myplayFactory/