ಮುಂಬಯಿ: “ಇನ್ನೂ ನಮ್ಮದೇ ಆದ ಸ್ವಂತ ಮನೆ ಹೊಂದಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್‌ನಿಂದ ಗಳಿಸುವ ಹಣದಿಂದ ಹೆತ್ತವರಿಗಾಗಿ ಮನೆ ಖರೀದಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ’ ಎಂದು ಮುಂಬೈ ಇಂಡಿಯನ್ಸ್ ತಂಡದ ಆಟಗಾರ ತಿಲಕ್ ವರ್ಮ ಹೇಳಿದ್ದಾರೆ.
2020ರ ಅಂಡರ್-19 ವಿಶ್ವಕಪ್ ತಂಡದ ಸದಸ್ಯರಾಗಿದ್ದ ತಿಲಕ್ ವರ್ಮ ಅವರನ್ನು ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 1.7 ಕೋಟಿ ರೂ.ಗೆ ಖರೀದಿಸಿದೆ. ಮುಂಬೈ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಸೋತಿದ್ದರೂ ತಿಲಕ್ ವರ್ಮ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. 22 ಮತ್ತು 61 ರನ್ ಗಳಿಸುವ ಮೂಲಕ ತಂಡವನ್ನು ಆಧರಿಸಿದ್ದಾರೆ.
ತೀವ್ರ ಆರ್ಥಿಕ ಸಮಸ್ಯೆ:
“ನಾವು ಬೆಳೆಯುತ್ತಿರುವಂತೆ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದೇವೆ. ತಂದೆ ತನ್ನ ಅಲ್ಪ ಸಂಬಳದಲ್ಲಿ ನನ್ನ ಕ್ರಿಕೆಟ್ ವೆಚ್ಚದ ಜತೆಗೆ ಅಣ್ಣನ ವಿದ್ಯಾಭ್ಯಾಸದ ಖರ್ಚನ್ನು ನೋಡಬೇಕಿತ್ತು. ಕಳೆದ ಕೆಲವು ವರ್ಷಗಳಿಂದ ಸ್ವಲ್ಪಮಟ್ಟಿನ ಪ್ರಾಯೋಜಕತ್ವ ಮತ್ತು ಪಂದ್ಯಕ್ಕೆ ನೀಡಿದ ಹಣದಿಂದ ನನ್ನ ಕ್ರಿಕೆಟಿನ ವೆಚ್ಚವನ್ನು ನಿಭಾಯಿಸುತ್ತಿದ್ದೇನೆ’ ಎಂದು ವರ್ಮ ಹೇಳಿದ್ದಾರೆ.
“ಇದೀಗ ಐಪಿಎಲ್ ಹರಾಜು ಮೂಲಕ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ಹೆತ್ತವರಿಗಾಗಿ ಮನೆ ಖರೀದಿಸುವ ಗುರಿ ಇಟ್ಟುಕೊಂಡಿದ್ದೇನೆ. ಐಪಿಎಲ್‌ನಲ್ಲಿ ಸಿಗುವ ಹಣದಿಂದ ನನ್ನ ಕ್ರೀಡಾಬಾಳ್ವೆಯ ಇನ್ನುಳಿದ ದಿನಗಳಲ್ಲಿ ಆರಾಮವಾಗಿ ಆಡಬಹುದು’ ಎಂದವರು ತಿಳಿಸಿದರು.
“ಐಪಿಎಲ್ ಹರಾಜು ನಡೆಯುತ್ತಿದ್ದ ದಿನ ನನ್ನ ಕೋಚ್ ಜತೆ ವೀಡಿಯೋ ಕಾಲ್ ಮಾಡಿದ್ದೆ. ಹರಾಜಿನಲ್ಲಿ 1.7 ಕೋಟಿ ರೂ.ಗಳಿಗೆ ಮುಂಬೈ ಖರೀದಿಸಿದಾಗ ಅವರು ಭಾವುಕರಾದರು. ಆ ಬಳಿಕ ಹೆತ್ತವರಿಗೆ ಕರೆ ಮಾಡಿದಾಗ ಅವರು ಕೂಡ ಭಾವೋದ್ವೇಗಕ್ಕೆ ಒಳಗಾದರು. ಅವರಿಂದ ಮಾತೇ ಹೊರಡಲಿಲ್ಲ’ ಎಂದು ತಿಲಕ್ ವರ್ಮ ಹೇಳಿದರು.