ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದರೆ ಗೋಕಾಕದಿಂದ ಸ್ಪರ್ಧಿಸುವುದಾಗಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದು, ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಚಿವ ರಮೇಶ ಜಾರಕಿಹೊಳಿ ಅವರು ಗ್ರಾಮೀಣ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ, ಮಾಡಲಿ. ನಾನೂ ಇನ್ನು ಮುಂದೆ ರಮೇಶ ಪ್ರತಿನಿಧಿಸುವ ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದರೆ ಗೋಕಾಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತೇನೆ ಎಂದು ಹೆಬ್ಬಾಳಕರ್ ಅಚ್ಚರಿಯ ಹೇಳಿಕೆ ನೀಡಿದರು.
ಇದನ್ನೂ ಓದಿ:ನನ್ನ ಹೆಸರಲ್ಲಿ ಬೇಡ, ರಾಜ್ಯದ ಜನರ ಹೆಸರಲ್ಲಿ ಪೂಜೆ ಮಾಡಿ ಎಂದ ಸಿದ್ದರಾಮಯ್ಯ
ಸಚಿವ ರಮೇಶ ಜಾರಕಿಹೊಳಿ ನೀಡುತ್ತಿರುವ ಹೇಳಿಕೆ, ಆರೋಪಕ್ಕೆ ನಾನೇನೂ ಮೌನವಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗ್ರಾಮೀಣ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಜನರ ಸೇವೆ ಮಾಡುತ್ತ ನಾನು ಮುಂದುವರಿಯುತ್ತೇನೆ. ಕ್ಷೇತ್ರದ ಜನರಿಂದಲೇ ಜಾರಕಿಹೊಳಿ ಅವರಿಗೆ ತಕ್ಕ ಉತ್ತರ ಕೊಡಬೇಕು ಅಂದುಕೊಂಡಿದ್ದೇನೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ರವಿವಾರ ಗ್ರಾ.ಪಂ ನೂತನ ಸದಸ್ಯರಿಗೆ ಹಮ್ಮಿಕೊಂಡಿರುವ ಸನ್ಮಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಬ್ಬಾಳಕರ, ನಾಲ್ಕೈದು ರಾಜ್ಯಗಳಲ್ಲಿ ಶಾಸಕರನ್ನು ಹೈಜಾಕ್ ಮಾಡಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನು ನನ್ನ ಕ್ಷೇತ್ರದ ಗ್ರಾಪಂ ಸದಸ್ಯರ ಹೈಜಾಕ್ ಯಾವ ಲೆಕ್ಕ ಬಿಡಿ. ಅವರು ಪ್ರಜಾಪ್ರಭುತ್ವ ಮೇಲೆಯೇ ವಿಶ್ವಾಸ ಕಳೆದುಕೊಂಡಿದ್ದಾರೆ. ಎಲ್ಲವನ್ನೂ ಎದುರಿಸಲು ನಾನು ಸಮರ್ಥಳಿದ್ದೇನೆ ಎಂದು ಹೇಳಿದರು