ಬೆಂಗಳೂರು: ನಿರುದ್ಯೋಗಿ ಯುವಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಉದ್ಯೋಗಕ್ಕಾಗಿ ಯುವಜನರು ವೇದಿಕೆ “ಮೈ ಜಾಬ್’ ಎಂಬ ನೂತನ ಆ್ಯಪ್ ಹೊರತಂದಿದೆ. ಉದ್ಯೋಗಾವಕಾಶಗಳ ಬಗ್ಗೆ ಈ ಆ್ಯಪ್ ಸಂಪೂರ್ಣ ಮಾಹಿತಿ ನೀಡುವ ಆ್ಯಪ್ ಅನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ವೇದಿಕೆ ಸಂಚಾಲಕ ಮುತ್ತುರಾಜ್ ಮಾತನಾಡಿ, ದೇಶದಲ್ಲಿ ಶೇ.52ರಷ್ಟು ಯುವಕರಿದ್ದು ಎಲ್ಲರಿಗೂ ಉದ್ಯೋಗ ಸಿಗುತ್ತಿಲ್ಲ. ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ ಭರವಸೆ ಕೇವಲ ಮಾತಿನಲ್ಲೇ ಉಳಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಐದು ವರ್ಷದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು.ಆದರೆ ಮನೆ ಮನೆಗೆ ತಲುಪಿಸುತ್ತಿರುವ ಪುಸ್ತಕದಲ್ಲಿ 12 ಲಕ್ಷ ಉದ್ಯೋಗಳ ಕುರಿತು ಮಾಹಿತಿ ನೀಡಿದ್ದಾರೆ. ಹಾಗಾದರೆ ಉಳಿದ 38 ಲಕ್ಷ ಉದ್ಯೋಗಗಳು ಎಲ್ಲಿ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಓಟು ಹೆಸರಿನಲ್ಲಿ ಯುವಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು. ವೇದಿಕೆಯ ಸಂಚಾಲಕಿ ಕಾವ್ಯ ಮಾತನಾಡಿ,ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಹತ್ತು ಸಾವಿರ ಯುವ ಜನರ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.
ಜಿಲ್ಲಾ ಕ್ಷೇತ್ರಗಳಲ್ಲೂ ಕೂಡ ತಂಡ ರಚನೆ ಕಾರ್ಯ ನಡೆಯಲಿದೆ. ಮುಂದಿನ ವರ್ಷ ಫೆ.28 ರಂದು ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಯುವ ಜನರ ಅಧಿವೇಶನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.