Advertisement

My Hero Movie Review; ಸೂಕ್ಷ್ಮ ಸಂದೇಶದ ಆಪ್ತ ಸಿನಿಮಾ

09:38 AM Sep 01, 2024 | Team Udayavani |

ಕೆಲವು ಸಿನಿಮಾಗಳು ನೋಡ ನೋಡುತ್ತಲೇ ಆಪ್ತವಾಗಿ ಬಿಡುತ್ತವೆ. ಅಲ್ಲಿ ಸ್ಟಾರ್‌ ನಟ ಇರಬೇಕಿಲ್ಲ, ದೊಡ್ಡ ತಾರಾಗಣದ ಅಗತ್ಯವೂ ಇರಲ್ಲ. ಒಂದೊಳ್ಳೆಯ ಕಥೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿ ಬಿಟ್ಟರೆ ಸಾಕು, ಮುಂದೇ ಅದೇ ಪ್ರೇಕ್ಷಕರ ಜೊತೆ ಮಾತನಾಡುತ್ತಾ ಹೆಜ್ಜೆ ಹಾಕುತ್ತದೆ. ಈ ವಿಚಾರದಲ್ಲಿ “ಮೈ ಹೀರೋ’ ಸಿನಿಮಾದ ಪ್ರಯತ್ನ ಕೂಡಾ ಶ್ಲಾಘನೀಯ. ಮೇಲ್ನೋಟಕ್ಕೆ ಸರಳವೆನಿಸುವ ಒಂದು ಕಥೆಯನ್ನು ಅಷ್ಟೇ ಸುಂದರವಾಗಿ ನಿರೂಪಿಸುವ ಮೂಲಕ “ಮೈ ಹೀರೋ’ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ಹೋಗುತ್ತಾನೆ.

Advertisement

ನಿರ್ದೇಶಕ ಅವಿನಾಶ್‌ ವಿಜಯ್‌ಕುಮಾರ್‌ ಎರಡು ನೈಜ ಘಟನೆಗಳನ್ನಿಟ್ಟುಕೊಂಡು ಸಿನಿಮಾದ ಕಥೆ ಮಾಡಿದ್ದಾರೆ. ದಲಿತ ಹುಡುಗನೊಬ್ಬ ದೇವರು ಮುಟ್ಟಿದ ಎಂಬ ಕಾರಣಕ್ಕೆ ಕೆಲವು ಮೇಲ್ಜಾತಿಯ ಜನರು ಅವನನ್ನು ಸಾಯಿಸುವುದಕ್ಕೆ ಮುಂದಾಗುವ ಹಾಗೂ ಹಾಲಿವುಡ್‌ ನಟ ಸಿಲಿವೆಸ್ಟರ್‌ ಸ್ಟಲೋನ್‌ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮ್ಮ ಮಗನ ಶ್ರಾದ್ಧ ಮಾಡಿದ್ದು.. ಈ ಎರಡು ಘಟನೆಗಳೇ “ಮೈ ಹೀರೋ’ ಚಿತ್ರದ ಜೀವಾಳ.

ಇಲ್ಲಿ ವಿಶ್ವ ಎಂಬ ಹುಡುಗ ಹಾಗೂ ಗ್ಯಾರಿ ಎಂಬ ಯೋಧನ ನಡುವೆ ಇಡೀ ಸಿನಿಮಾ ಸಾಗುತ್ತದೆ. ವಿಶ್ವನ ಕಥೆ ಕೇಳುತ್ತಾ ಗ್ಯಾರಿಯ ಮನಸ್ಸು ಕರಗುತ್ತದೆ. ಅಲ್ಲಿಂದ ಸಿನಿಮಾ ಮಗ್ಗುಲು ಬದಲಿಸುತ್ತದೆ.

ಸಿನಿಮಾದಲ್ಲಿ ನಿರ್ದೇಶಕರು ಹಿಂದುಳಿದ ವರ್ಗದ ಶೋಷಣೆ, ವರ್ಣಭೇದ, ಯುದ್ಧ, ಅದರ ಹಿಂದಿನ ಕ್ರೌರ್ಯ… ಹೀಗೆ ಹಲವು ಅಂಶಗಳನ್ನು ಸೂಕ್ಷ್ಮವಾಗಿ ಹೇಳುತ್ತಾ ಹೋಗಿದ್ದಾರೆ. ಇಲ್ಲಿ ಸಂದೇಶವಿದೆ, ಚಿಂತನೆ ಮಾಡುವ ವಿಚಾರವೂ ಇದೆ. ಆದರೆ, ಅವ್ಯಾವುದನ್ನೂ ದೀರ್ಘ‌ವಾಗಿ ಹೇಳದೇ, ಸರಳವಾಗಿ ಮುಗಿಸುವ ಮೂಲಕ ಸಿನಿಮಾವನ್ನು “ಬೋರ್‌’ ಎಂಬ ಪದದಿಂದ ಮುಕ್ತಗೊಳಿಸಿದ್ದಾರೆ. ಕಮರ್ಷಿಯಲ್‌ ಅಂಶಗಳಿಲ್ಲದೆಯೂ ಒಂದು ಸಿನಿಮಾವನ್ನು ಆಪ್ತವಾಗಿಸುವುದು ಹೇಗೆ ಎಂಬುದಕ್ಕೆ “ಮೈ ಹೀರೋ’ ಒಳ್ಳೆಯ ಉದಾಹರಣೆ.

ಬಹುತೇಕ ಚಿತ್ರ ಮಾಸ್ಟರ್‌ ವೇದಿಕ್‌ ಮತ್ತು ಜಿಲಾಲಿ ರಜ್‌ ಕಲ್ಲಹ್‌ ಸುತ್ತ ಸಾಗುತ್ತದೆ. ಇಬ್ಬರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಅಂಕಿತಾ ಅಮರ್‌, ದತ್ತಣ್ಣ, ತನುಜಾ ಕೃಷ್ಣಪ್ಪ, ನಿರಂಜನ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ನಟಿಸಿದ್ದಾರೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.