ಇಡೀ ಊರಲ್ಲಿ ಟಿವಿ ರಿಪೇರಿ ಎಲೆಕ್ಟ್ರಿಷಿಯನ್ ಅಂತ ಇರುವುದು ನಾನೊಬ್ಬನೇ. ಅದಕ್ಕಿಂತ ಹೆಚ್ಚಾಗಿ, ಕಡಿಮೆ ದರದಲ್ಲಿ ಬೇಗ ರಿಪೇರಿ ಮಾಡಿ ಕೊಡ್ತಾನೆ. ಒಳ್ಳೆಯ ಹುಡುಗ ಅಂತ ಒಂದಿಷ್ಟು ಒಳ್ಳೆಯ ಹೆಸರು ಕೂಡ ಇದೆ. ಇಂತಿಪ್ಪ ಹಿನ್ನೆಲೆಯ ನನಗೆ, ಒಂದು ದಿನ ನಿನ್ನ ಫೋನು ಬಂತು. “ಸರ್, ನಮ್ಮನೇಲಿ ಟಿವಿ ಹಾಳಾಗಿದೆ. ಸ್ವಲ್ಪ ಬಂದು ರಿಪೇರಿ ಮಾಡಿ ಕೊಡ್ತೀರಾ’ ಎಂದು ಶುರು ಮಾಡಿದ ನೀನು, ಪಟಪಟನೆ ಒಂದೇ ಉಸುರಿನಲ್ಲಿ ಎಲ್ಲಾ ವಿಚಾರ ಹೇಳಿ, ಮನೆಯ ಅಡ್ರೆಸ್ ಕೂಡ ತಿಳಿಸಿಬಿಟ್ಟಿದ್ದೆ. ನಾನು, ಅದಾಗಿ ಹತ್ತು ನಿಮಿಷದಲ್ಲೇ ನಿಮ್ಮ ಮನೆಯೆದುರು ನಿಂತಿದ್ದೆ. ಜ್ಞಾಪಕ ಇದೆಯಾ?
Advertisement
ಅದೇ ಮೊದಲ ಸಲ ನಾನು ನಿನ್ನ ನೋಡಿದ್ದು. ನೀನವತ್ತು, ಕೆಂಪನೆಯ, ಉದ್ದ ಲಂಗದ ಮೇಲೊಂದು ನಸು ಹಳದಿ ಬಣ್ಣದ ಟಾಪ್ ಧರಿಸಿದ್ದೆ. ಕೂದಲನ್ನು ಮುಂದಕ್ಕೆ ಸ್ವಲ್ಪವೇ ಇಳಿಬಿಟ್ಟು, ಹಿಂದೆ ತುರುಬನ್ನು ಕಟ್ಟಿದ್ದೆ . ಏಕೋ ಗೊತ್ತಿಲ್ಲ. ನಿನ್ನ ಆ ಡ್ರೆಸ್‌ನ ಅಂದವನ್ನು ನೋಡಿಯೇ ಬಹಳ ಖುಷಿಯಾಗಿತ್ತು. ಅದರ ಮೇಲೆ ನಿನ್ನ ಮುಖದ ಮೇಲಿರುವ ಚಂದನೆಯ ನಗು ಹೃದಯದಲ್ಲಿ ಅಲೆಗಳೆಬ್ಬಿಸಿತ್ತು !
Related Articles
Advertisement
ಅಭಿಜ್ಞಾ, ಸತ್ಯ ಹೇಳ್ತೀನಿ. ಟಿವಿ ರಿಪೇರಿಗಾಗಿ ಕಾಲ್ ಮಾಡಿಯೇ ಮಾಡುತ್ತೀ ಅನ್ನುವ ಅದೊಂದೇ ಭರವಸೆಯಿಂದ ಮೊಬೈಲನ್ನು ಕೈಯಲ್ಲೇ ಹಿಡಿದುಕೊಂಡು ಪದೇ ಪದೇ ನೋಡುತ್ತಿದ್ದೇನೆ. ಟಿವಿ ಹಾಳಾಗಿದೆ, ಸ್ವಲ್ಪ ಬನ್ನಿ ಮರಾಯ್ರೆ ಅಂತ ಕೇಳಿಕೊಂಡು ಬಂದ ಬೇರೆ ಗ್ರಾಹಕರ ಕಾಲ್‌ಗಳನ್ನೆಲ್ಲಾ ಸ್ವೀಕರಿಸಿ, ನಾಳೆ ಬರುತ್ತೀನಿ ಎಂದು ಹೇಳುತ್ತಿದ್ದೇನೆ. ಯಾಕಂದ್ರೆ, ಅಲ್ಲಿಗೆ ಹೋದ ಮೇಲೆ ನಿನ್ನ ಕಾಲ್ ಬಂದ್ರೆ ನನಗೆ ರಿಪೇರಿ ಕೆಲಸದ ಮಧ್ಯೆ ಬಿಟ್ಟು ಬರಲಾಗುವುದಿಲ್ಲವಲ್ಲ. ಹಾಗಾಗಿ. ನಿಂಗೊತ್ತಾ ? ನಿಮ್ಮನೆ ಟಿವಿಗಿಂತ ನನ್ನ ಹೃದಯವೇ ಹೆಚ್ಚು ಹಾಳಾಗಿ ಹೋದಂತಿದೆ. ಅದನ್ನು ರಿಪೇರಿ ಮಾಡಲು ನಿನ್ನಿಂದ ಮಾತ್ರ ಸಾಧ್ಯವಾಗೋದು. ಪ್ಲೀಸ್, ಒಂದೇ ಒಂದು ಕಾಲ್ ಮಾಡು ಇವತ್ತೇ ಬರ್ತಿನಿ. ನಿಮ್ಮನೆ ಟಿವಿಯನ್ನು ಇವತ್ತೇ ರಿಪೇರಿ ಮಾಡಿ ಕೊಡ್ತೀನಿ.
ಇತೀ ಕಾಯುತ್ತಿರುವಟಿವಿ ರಿಪೇರಿ ಹುಡುಗ ನರೇಂದ್ರ ಎಸ್. ಗಂಗೊಳ್ಳಿ