ಭುವನೇಶ್ವರ್: ಏಶ್ಯನ್ ಗೇಮ್ಸ್‌ನ ವನಿತೆಯರ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಸ್ಪ್ರಿಂಟರ್ ದ್ಯುತಿ ಚಂದ್ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವುದು ತನ್ನ ಗುರಿ ಎಂದು ಹೇಳಿದ್ದಾರೆ.
ರವಿವಾರ ನಡೆದ ವನಿತೆಯರ 100 ಮೀ. ಓಟದ ಫೈನಲ್‌ನಲ್ಲಿ 11 ನಿಮಿಷ, 29 ಸೆಕೆಂಡ್‌ಗಳಲ್ಲಿ ಓಡಿ ಪದಕ ಗೆದ್ದ ದ್ಯುತಿ 20 ವರ್ಷಗಳ ಬಳಿಕ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ.
“ಯಾವಾಗ ನನ್ನ ಹೆಸರನ್ನು ಘೋಷಿಸಲಾಯಿತೋ, ಅದು ನನ್ನ ಪಾಲಿನ ಬಹುದೊಡ್ಡ ಕನಸು ನನಸಾದ ಕ್ಷಣವಾಗಿತ್ತು. ಖುಷಿ ವ್ಯಕ್ತಪಡಿಸಲಾಗಲಿಲ್ಲ. ದೇಶದ ಧ್ವಜದೊಂದಿಗೆ ಮೈದಾನದಲ್ಲಿ ಅತ್ತಿತ್ತ ಓಡಾಡಿರುವುದು ಹೆಮ್ಮೆಯ ವಿಚಾರ. ನನ್ನನ್ನು ಈ ಕೂಟಕ್ಕೆ ತಯಾರು ಮಾಡಲು ಕೋಚ್ ಎನ್. ರಮೇಶ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಎಲ್ಲ ಹೆಗ್ಗಳಿಕೆ ಅವರಿಗೆ ಸಲ್ಲಬೇಕು’ ಎಂದು ಪದಕ ಗೆದ್ದ ಸಂಭ್ರಮವನ್ನು ವಿವರಿಸಿದ್ದಾರೆ.
1.5 ಕೋಟಿ ರೂ. ಬಹುಮಾನ
ಏಶ್ಯಾಡ್‌ನಲ್ಲಿ ಮೊದಲ ಪದಕ ಗೆದ್ದ ದ್ಯುತಿ ಚಂದ್‌ಗೆ ಒಡಿಶಾ ಸರಕಾರ 1.5 ಕೋಟಿ ರೂ. ಬಹುಮಾನ ಘೋಷಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ಈ ವಿಷಯ ಪ್ರಕಟಿಸಿದರು.
0.02 ಸೆಕೆಂಡ್‌ಗಳಿಂದ ಚಿನ್ನದ ಪದಕ ತಪ್ಪಿರಬಹುದು. ನನ್ನ ಪ್ರದರ್ಶನದಿಂದ ಸಂತೃಪ್ತಿ, ಸಂತಸವಿದೆ. ಮುಂದಿನ ಕೂಟಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಇದು ಉತ್ತೇಜಿಸಿದೆ. ನನ್ನ ಆತ್ಮಸೆœ„ರ್ಯವನ್ನು ಹೆಚ್ಚಿಸಿದೆ. ಇದು ನನ್ನ ಮೊದಲ ಏಶ್ಯನ್ ಗೇಮ್ಸ್. ಇದಕ್ಕಾಗಿ ಶ್ರಮವಹಿಸಿ ತರಬೇತಿ ಪಡೆದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪ್ರೋತ್ಸಾಹ ದೊರಕಿದ್ದು, 2020ರಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಸಾಕಷ್ಟು ತಯಾರಿ ನಡೆಸಬೇಕಾಗಿದೆ.
-ದ್ಯುತಿ ಚಂದ್