ಗಣೇಶನನ್ನು ಹೇಗೆಲ್ಲಾ ಸಂಭ್ರಮಿಸಬಹುದು? ಮೂರ್ತಿ ಕೂರಿಸಿ ಪೂಜೆ ಮಾಡುವ ಮೂಲಕ, ತಿಂಡಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸುವ ಮೂಲಕ ಪಡುವ ಸಂಭ್ರಮ ಗೊತ್ತಿರುವುದೇ. ಇಲ್ಲೊಬ್ಬರು ಅಕ್ಷರಗಳ ಮೂಲಕ ಗಣೇಶನನ್ನು ಸಂಭ್ರಮಿಸುತ್ತಿದ್ದಾರೆ. ಕಲಾವಿದ ವೆಂಕಟೇಶ್ ಎಲ್ಲೂರ ಅವರಿಗೆ ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಮೊದಲು ಅವರ ಹೆಸರನ್ನು ಕೇಳಿ ಪಡೆಯುತ್ತಾರೆ. ಹೆಸರಲ್ಲೇನಿದೆ ರೀ ಎಂದಿರಾ? ತಡೆಯಿರಿ ಹೆಸರಲ್ಲಿ ಗಣೇಶ ಇದ್ದಾನೆ. ಹೆಸರನ್ನು ತಿಳಿದುಕೊಂಡ ನಂತರ ವೆಂಕಟೇಶ್ ಅವರು ಒಂದು ಕಾಗದವನ್ನು ತೆಗೆದುಕೊಂಡು ಅವರ ಅಕ್ಷರಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಗಣಪತಿಯ ಚಿತ್ರವನ್ನು ಮೂಡಿಸಿಬಿಡುತ್ತಾರೆ. ಮುಂದಿರುವವರು ಒಂದು ಕ್ಷಣ ಅಚ್ಚರಿಪಡಲೇಬೇಕು!
ಹೀಗೆ ಅಕ್ಷರಗಳಲ್ಲಿ ವಿಭಿನ್ನ ಮಾದರಿಯ ಗಣಪನನ್ನು ಸೃಷ್ಟಿಸಿ ಎಲ್ಲರ ಮನ ಗೆಲ್ಲುತ್ತಿರುವ ವೆಂಕಟೇಶ್ ಎಲ್ಲೂರ ಅವರು ಆರ್.ಟಿ.ನಗರದ ನಿವಾಸಿ. ಈಗಾಗಲೇ ಸುಮಾರು 20 ಸಾವಿರಕ್ಕಿಂತ ಹೆಚ್ಚು ಅಕ್ಷರಗಣಪನನ್ನು ತಯಾರಿಸಿದ್ದಾರೆ. ವೆಂಕಟೇಶ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಬಾಲ್ಯದಿಂದಲೂ ಇವರಿಗೆ ಕಲೆಯಲ್ಲಿ ಆಪಾರವಾದ ಆಸಕ್ತಿ. ಆಗ ಚಿಕ್ಕಪುಟ್ಟ ಚಿತ್ರಗಳನ್ನು ಬಿಡಿಸುತ್ತಿದ್ದರು. 2004ರಲ್ಲಿ ತಮಗರಿವಿಲ್ಲದೆ ಈ ಹವ್ಯಾಸವನ್ನು ಕಂಡುಕೊಂಡರು. ಅಂದಿನಿಂದ ತಮ್ಮ ಈ ಹವ್ಯಾಸದಿಂದ ಹಬ್ಬದ ಖುಷಿಯನ್ನು ಹಂಚುತ್ತಾ ಬಂದಿದ್ದಾರೆ.
ಇವರ ಬಳಿ ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳು, ಶಿಕ್ಷಕರು ಹೀಗೆ ಹಲವಾರು ಮಂದಿ ತಮ್ಮ ಆಪ್ತರಿಗೆ ಉಡುಗೊರೆ ನೀಡಲು ಅಕ್ಷರ ಗಣಪನನ್ನು ಮಾಡಿಸಿಕೊಂಡಿದ್ದಾರೆ. ಕಲೆಯು ಯಾವ ರೀತಿಯಲ್ಲೆಲ್ಲಾ ರೂಪಾಂತರ ಹೊಂದಿ, ಹೇಗೆಲ್ಲಾ ಸ್ಪೂರ್ತಿ ನೀಡುತ್ತದೆ ಎಂಬುದಕ್ಕೆ ಅಕ್ಷರ ಗಣಪನೇ ಸಾಕ್ಷಿ.
ಮಾಹಿತಿಗೆ: myganesha.com
– ವಿ.ಎಸ್. ನಾಯಕ್