ಬೆಳಗಾವಿ: “ಬಿಜೆಪಿ ಮತ್ತು ಜೆಡಿಎಸ್‌ಗೆ ನನ್ನ ಕಂಡರೆ ಬಹಳ ಭಯ. ಅದೇ ಕಾರಣಕ್ಕೆ ಅವರು ಪದೇಪದೆ ನನ್ನ ಹೆಸರು ಪ್ರಸ್ತಾಪ ಮಾಡುತ್ತಾರೆ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ನನ್ನ ಕಂಡರೆ ಅವರಿಗೆ ಭಯ ಅಥವಾ ಪ್ರೀತಿ ಇರಬೇಕು. ಹೀಗಾಗಿ, ಮೇಲಿಂದ ಮೇಲೆ ನನ್ನ ಹೆಸರು ಬರುತ್ತದೆ’ ಎಂದರು.
ಸಮೀಕ್ಷೆ ನಂಬಲಾರೆ: ಉಪಚುನಾವಣೆಯ ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸಮೀಕ್ಷೆಗಳು ಏನಾಗಿವೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅಂದಾಜಿನ ಮೇಲೆ ಸಮೀಕ್ಷೆ ಮಾಡಿರುತ್ತಾರೆ. ಹೀಗಾಗಿ, ಅದರ ಮೇಲೆ ನನಗೆ ನಂಬಿಕೆ ಇಲ್ಲ. ನಾವು ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಕಥೆ ಮುಗಿಯುತ್ತೆ ಎಂಬ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರಿಬ್ಬರೂ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್‌ನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುವುದು ಕೇವಲ ಭ್ರಮೆ ಎಂದರು.
ಕೇಂದ್ರದಿಂದ ಜಿಎಸ್‌ಟಿ ಬಾಕಿ: ನೆರೆ ಪರಿಹಾರ ವಿತರಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಮೊದಲು ಹತ್ತು ಸಾವಿರ, ನಂತರ ಒಂದು ಲಕ್ಷ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಅನೇಕ ಸಂತ್ರಸ್ತರಿಗೆ ಈಗಲೂ ಪರಿಹಾರ ಹಾಗೂ ರೈತರಿಗೆ ಬೆಳೆಹಾನಿ ಪರಿಹಾರ ಬಂದಿಲ್ಲ. ಕೇಂದ್ರ ಸರ್ಕಾರದಿಂದ ಜಿಎಸ್‌ಟಿಯ 5,600 ಕೋಟಿ ರೂ.ರಾಜ್ಯಕ್ಕೆ ಬರಬೇಕು. ನಮ್ಮ ಪಾಲನ್ನು ಕೇಂದ್ರ ಸರ್ಕಾರ ಇನ್ನೂ ಕೊಟ್ಟಿಲ್ಲ. ಅದರಿಂದ ಬಹಳ ತೊಂದರೆಯಾಗಿದೆ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 8ರಿಂದ 10 ಸ್ಥಾನ ಗೆಲ್ಲಲಿದೆ. ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮನೆಗೆ ಹೋಗುತ್ತಾರೆಂದು ನಾನು ಹೇಳಿಲ್ಲ. ಬಿಜೆಪಿ ಸರ್ಕಾರ ಮನೆಗೆ ಹೋಗುತ್ತದೆ ಎಂದು ಹೇಳಿದ್ದೇನೆ. ಆದರೆ, ನಾನೇ ಮನೆಗೆ ಹೋಗುತ್ತೇನೆಂದು ಕೆಲ ಬಿಜೆಪಿಗರು ಟೀಕಿಸಿದ್ದಾರೆ.
-ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ.