Advertisement

ವಿಕಸಿತ ದಕ್ಷಿಣ ಕನ್ನಡ ಸಾಧ್ಯವಾಗಿಸುವ ಕನಸು ನನ್ನದು: ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್‌ ಚೌಟ

11:43 PM Apr 05, 2024 | Team Udayavani |

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಕ್ಯಾ| ಬೃಜೇಶ್‌ ಚೌಟ ಅವರು ಗೂರ್ಖ ರೈಫಲ್ಸ್‌ ರೆಜಿಮೆಂಟ್‌ನಲ್ಲಿ ಆರ್ಮಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ಇಂದೋರ್‌ನ ಐಐಎಂನಲ್ಲಿ ಪದವಿ ಪಡೆದಿದ್ದಾರೆ. 2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2016-19ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ , 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು. ಈಗ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಅವರ ಎದುರಾಳಿಯಾಗಿದ್ದಾರೆ.

Advertisement

ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ಧನ್ಯತೆಯ ಭಾವ ನನ್ನದು, ಒಂದು ಕಡೆ ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರ ನೇತೃತ್ವದ ಸರಕಾರವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಲು ನೀಡಿದ ಈ ಅಪೂರ್ವ ಅವಕಾಶ, ಇನ್ನೊಂದೆಡೆ ನಮ್ಮ ತುಳುನಾಡಿನ ದಕ್ಷಿಣ ಕನ್ನಡ ಎಂಬ ಒಂದು ಸಾಧ್ಯತೆಗಳ ಸಾಗರದ ಈ ಅಮೃತ ಕಾಲದ ವಿಕಾಸದ ಪಯಣಕ್ಕೆ ನಾಂದಿ ಹಾಡಲು ನೀಡಿರುವ ಜವಾಬ್ದಾರಿ.

ಚುನಾವಣೆಗೆ ಸ್ಪರ್ಧಿಸಬೇಕು ಎನ್ನಿಸಿದ್ದು ಯಾವಾಗ, ಯಾಕೆ ಮತ್ತು ಪ್ರೇರಣೆ ಏನು?
ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಮೋದಿಯವರೇ ಪ್ರೇರಣೆ. ಸೈನ್ಯಕ್ಕೆ ಸೇರುವ ಮೊದಲೇ ಸಂಘದ ಸಂಪರ್ಕ-ಸಂಸ್ಕಾರವಿತ್ತು. ಸೈನ್ಯಕ್ಕೆ ಸೇರಲೂ ಅದೇ ಪ್ರೇರಣೆ. ಅಲ್ಲಿಂದ ಮರಳಿದ ಮೇಲೆ ರಾಜಕೀಯ ಸೇರುವ ಹುಮ್ಮಸ್ಸಿತ್ತು. ರಾಷ್ಟ್ರೀಯತೆ ನನ್ನ ಆದ್ಯತೆಯಾದ್ದರಿಂದ ಬಿಜೆಪಿಯಲ್ಲಿ ಕೆಲಸ ಮಾಡತೊಡಗಿದೆ.

ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ನಮಗೆ ಸಂಘಟನೆಯಲ್ಲಿ ರಾಷ್ಟ್ರ ಮೊದಲು, ಪಕ್ಷ ಬಳಿಕ ಎಂದು ಹೇಳಿಕೊಟ್ಟಿದ್ದಾರೆ. ಸೇನೆಯಲ್ಲೂ ದೇಶದ ಸುರಕ್ಷೆ, ಗೌರವ ಹಾಗೂ ಕಲ್ಯಾಣವೇ ಮೊದಲು. ಬಳಿಕ ಜನರದ್ದು, ಕೊನೆಯಲ್ಲಿ ಸ್ವಂತದ್ದು. ಹಾಗಾಗಿ ನನಗೆ ಈ ತತ್ವವೊಂದೇ ಗಾಡ್‌ಫಾದರ್‌.

ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ವಿಶ್ವದ ಅತಿ ದೊಡ್ಡ ಪಕ್ಷದಲ್ಲಿ ಸ್ಪರ್ಧಿಸಲು ಯುವ ಕಾರ್ಯಕರ್ತನಿಗೆ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ. ಪರಿಸ್ಥಿತಿಗಳು ಅದಕ್ಕೆ ಪೂರಕವಾಗಿರಬಹುದು. ಮೋದಿಯವರ ನಾಯಕತ್ವದಲ್ಲಿ ಯುವ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ. ನನ್ನ ಸೇನಾ ಸೇವೆ ಗುರುತಿಸಿ, ಸಾಮಾನ್ಯ ಮನೆತನದಿಂದ ಬಂದ ಒಬ್ಬ ಸೈನಿಕನಿಗೆ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಕೊಟ್ಟಿದ್ದಾರೆ.

Advertisement

ಜನ ನಿಮಗೆ ಯಾವ ಕಾರಣಕ್ಕೆ ಮತ ಹಾಕಬೇಕು?
ದೇಶದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಲು, ಮೂಲಸೌಕರ್ಯ ಕಾರ್ಯಗಳನ್ನು ಸುಸೂತ್ರವಾಗಿ ಮುಂದುವರಿಸಲು, ಹಿಂದುತ್ವಕ್ಕೆ ಧಕ್ಕೆಯಾಗದಂತೆ ನಿರ್ವಹಿಸಲು ಮತ ಹಾಕಿ ಎಂದು ಕೋರುವೆ.

ಈ ಚುನಾವಣೆಯನ್ನು ಹೇಗೆ ಗೆಲ್ಲುವಿರಿ? ಪ್ರಮುಖ ಐದು ಕಾರಣ ಹೇಳಿ.
ಮೋದಿ ನಾಯಕತ್ವ. ಪಕ್ಷದ ಸಂಘಟನಾ ಶಕ್ತಿ. ಕಾರ್ಯಕರ್ತರ ಪರಿಶ್ರಮ. ಹತ್ತು ವರ್ಷಗಳ ಬಿಜೆಪಿ ಸರಕಾರದ ಸಾಧನೆ. ನಮ್ಮ ವಿಚಾರಧಾರೆ.

ನಿಮ್ಮ ಕನಸೇನು, ಗೆದ್ದು ದಿಲ್ಲಿಗೆ ಹೋಗಿ ಏನು ಮಾಡುವಿರಿ?
ಮೋದಿಯವರ 2047ರ ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕವಾಗಿ “ವಿಕಸಿತ ದಕ್ಷಿಣ ಕನ್ನಡ’ ನಿರ್ಮಿಸುವ ಕನಸು ನನ್ನದು. ನಮ್ಮ ಜಿಲ್ಲೆಗೆ ಹಲವು ಸಾಮರ್ಥ್ಯಗಳಿವೆ. ಭೌಗೋಳಿಕ ಶ್ರೀಮಂತ, ಶೈಕ್ಷಣಿಕವಾಗಿ ಮುಂದುವರಿದಿದ್ದು, ಸಾಂಸ್ಕೃತಿಕವಾಗಿ ಗಟ್ಟಿಯಿದೆ. ಜನರು ಸಾಮರ್ಥ್ಯವಂತರು- ಸ್ವಾಭಿಮಾನಿಗಳು. ಅವರ ಸಾಮರ್ಥ್ಯಕ್ಕನುಗುಣವಾಗಿ ಅವಕಾಶ ರೂಪಿಸಲು ಜನಪ್ರತಿನಿಧಿಗಳ-ಜನರ ಭಾಗೀದಾರಿಕೆಯೊಂದಿಗೆ ಸರಕಾರದ ವ್ಯವಸ್ಥೆ ಬಳಸಿಕೊಳ್ಳುವೆ.

ಗೆದ್ದರೆ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸವೇನು?
ಸಂಸದ ನಳಿನ್‌ ಕುಮಾರ್‌ ಆರಂಭಿಸಿರುವ ಮೂಲ ಸೌಕರ್ಯ ಯೋಜನೆಗಳ ಜಾರಿಗೆ ಇರುವ ಅಡ್ಡಿಗಳನ್ನು ನಿವಾರಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಆದ್ಯತೆ ನೀಡುವೆ.

ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು?
ಜನಪ್ರತಿನಿಧಿಗಳು, ಜನರು, ತಜ್ಞರನ್ನು ಸೇರಿಸಿಕೊಂಡು “ವಿಕಸಿತ ದಕ್ಷಿಣ ಕನ್ನಡದ ವಿಷನ್‌ ಡಾಕ್ಯುಮೆಂಟ್‌’ ರೂಪಿಸುವೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯಪಡೆ ರಚಿಸಿ, ಪ್ರಧಾನಿ ಮಾರ್ಗದರ್ಶನದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಾಗುವುದು. ಮಂಗಳೂರು- ಬೆಂಗಳೂರು ಮಧ್ಯೆ ರಸ್ತೆ ರೈಲು ಮನುಷ್ಯ, ಸರಕನ್ನು ಕಡಿಮೆ ಅವಧಿಯಲ್ಲಿ ಮುಟ್ಟಿಸುವುದಕ್ಕೆ ಯೋಜನೆ ರೂಪಿಸುವೆ. ಮಂಗಳೂರು ಬಂದರನ್ನು ದೇಶದ ಪ್ರಮುಖ ಬಂದರಾಗಿ ರೂಪಿಸಲು ಯೋಜನೆ. ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಇಲ್ಲಿ ಕಲಿತವರಿಗೆ ಇಲ್ಲೇ ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹ, ಇಲ್ಲಿಂದ ಹೊರಗೆ ಹೋಗಿ ದೊಡ್ಡ ಉದ್ದಿಮೆ ಸ್ಥಾಪಿಸಿದವರನ್ನು ಸೇರಿಸಿ, ನಮ್ಮಲ್ಲಿ ಹೂಡಿಕೆ ಮಾಡಿ, ಮಂಗಳೂರಿನ ಬ್ರ್ಯಾಂಡ್ ಅಂಬಾಸಿಡರ್‌ ಮಾಡಲಾಗುವುದು. ಇಲ್ಲಿಯ ದೇವಸ್ಥಾನಗಳನ್ನು ಜಗತ್ತಿಗೆ ಪರಿಚಯಿಸುವುದು,

ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ನಮ್ಮ ಪಕ್ಷದಲ್ಲಿ ಒಂದು ವಿಶೇಷತೆ ಇದೆ. ಅದು ಕಾಂಗ್ರೆಸ್‌ ಮನಃಸ್ಥಿತಿಯವರಿಗೆ ತಿಳಿಯದು. ಯುವಕರನ್ನು ಬೆಳೆಸುವುದು, ಹಿರಿಯರು ಕಿರಿಯರ ಕೈ ಹಿಡಿದು ಮುನ್ನಡೆಸುವುದು. ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಜಿಲ್ಲಾಧ್ಯಕ್ಷರು, ಸಂಘ ಪರಿವಾರ. ನಾನು ಕೇವಲ ಅವರ ಪ್ರತಿನಿಧಿಯಾಗಿ, ನಿಮಿತ್ತವಾಗಿ ಚುನಾವಣೆ ಎದುರಿಸುತ್ತಿದ್ದೇನೆ.

– ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next