ಇವನು ಬೇರೆ ಯಾರೂ ಅಲ್ಲ ನನ್ನ ನೆಚ್ಚಿನ ಗೆಳೆಯ, ಯಾವಾಗಲೂ ನನ್ನ ಕೈ ಹಿಡಿದು ನನ್ನೊಂದಿಗೆ ನಿಲ್ಲುವನು. ನನ್ನ ಪಕ್ಕದಲ್ಲಿ ಯಾರೂ ಇರಲಾರರು, ನನ್ನ ಮತ್ತು ನನ್ನೀ ಗೆಳೆಯನ ಬಿಟ್ಟು ಎಲ್ಲರೂ ನಮಗೆ ಎದುರಾಗಿ ನಿಲ್ಲುವರು. ನನಗೆ ಬೇಸರವಿಲ್ಲ. ಯಾಕೆಂದರೆ, ಇವನು ನನ್ನ ಬಳಿ ಬಂದರೆ ನಗದವರು ಕೂಡ ಒಂದು ಕ್ಷಣ ಮೊಗತುಂಬ ಮುಗುಳ್ನಗೆ ಚೆಲ್ಲಿ ಬಿಡುತ್ತಾರೆ. ಅದು ನನ್ನ ಗೆಳೆಯನ ಸಾಮಾರ್ಥ್ಯ. ಇವನಿಗೆ ಯಾರನ್ನು ನೋಯಿಸಲೂ ಬರುವುದಿಲ್ಲ. ಇವನಲ್ಲಿನ ಅದ್ಭುತ ಗುಣವೆಂದರೆ, ಚೆಲ್ಲಿದ ಸಭೆಯನ್ನು ಒಂದುಗೂಡಿಸಿ ಅವರಲ್ಲಿ ಏನೇ ಮುನಿಸಿದ್ದರೂ ನಗು ಚೆಲ್ಲಿಸುವ ಜಾದೂಗಾರನವನು.
ನನಗೂ ಅವನಿರುವಾಗ ಯಾರ ಸಂಗವೂ ಬೇಕಿಲ್ಲ. ಕಾರಣ, ಅವನು ನನಗೆ ಎಂದೂ ಒಂಟಿತನವನ್ನು ಕಾಡಲು ಬಿಟ್ಟಿಲ್ಲ. ನಿಜ ಹೇಳಬೇಕಾದರೆ, ಇವನು ಗಾತ್ರದಲ್ಲಿ ಎಲ್ಲರಿಗಿಂತ ಚಿಕ್ಕವನು, ಆದರೆ ಇವನ ಸಾಮರ್ಥ್ಯ ಅಳತೆಗೂ ಮೀರಿದ್ದು.
ಇನ್ನು ಶುಭ ಸಂಭ್ರಮದ ದಿನಗಳಲ್ಲಂತೂ ಹೇಳುವುದೇ ಬೇಡ ಎಲ್ಲರು ನನ್ನ ಗೆಳೆಯನ ನೋಡಿ ನನ್ನ ಬಳಿ ಓಡೋಡಿ ಬರುತ್ತಾರೆ.
ನಾನು ಕೆಲವೊಮ್ಮೆ ನಿಮ್ಮ ಆ ಸುಂದರ ನಗೆ ಚೆಲ್ಲಿ ಎಂದರೆ ಕೂಡಲೆ ನಗೆಯ ಸಾಗರವನ್ನೇ ಹರಿಸುತ್ತಾರೆ. ಆದರೆ ಆ ನಗು ನನಗಲ್ಲ; ನನ್ನ ಗೆಳೆಯನಿಗೆ ಮಾತ್ರ. ಆದರೂ ನನ್ನೀ ಗೆಳೆಯನ ಮೂಲಕ ಎಲ್ಲರಲ್ಲೂ ನಗೆಹನಿಗಳ ಚೆಲ್ಲಿಸಿದೆ ಎಂಬ ನೆಮ್ಮದಿ ನನಗಿರುತ್ತದೆ. ಆದರೆ, ಈಗ ನನ್ನ ಗೆಳೆಯನಿಗೆ ಆರೋಗ್ಯ ಸರಿಯಿಲ್ಲ. ನನ್ನ ಎದುರಿದ್ದ ಜನರಲ್ಲಿ ನಗು ತರಿಸಲು ನನಗಾಗುತ್ತಿಲ್ಲ. ನನ್ನ ಗೆಳೆಯನಿಲ್ಲದೆ ನಿಂತು ನಗುಚೆಲ್ಲಲಾಗದೇ ಜನರೆಲ್ಲ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇವರೆಲ್ಲರನ್ನು ಒಂದು ಚೌಕದೊಳಗೆ ಸೇರಿಸಿ ನಗುತರಿಸಲು ನೀನು ಬೇಗ ಸರಿಯಾಗಿ ಬರಬೇಕು, ನನ್ನ ಪ್ರೀತಿಯ ಕೆಮರಾವೇ.
ಅಕ್ಷಯ ರೈ
ದ್ವಿತೀಯ ಬಿ. ಎ. ಆಳ್ವಾಸ್ ಕಾಲೇಜು, ಮೂಡುಬಿದ್ರಿ