Advertisement

ನನ್ನ ಅಂಕಣಗಳೇ ನನಗೆ ಮಹಾಕಾವ್ಯ

01:21 AM Aug 05, 2019 | Lakshmi GovindaRaj |

ಬೆಂಗಳೂರು: “ನನ್ನ ಅಂಕಣಗಳೇ ನನಗೆ ಮಹಾಕಾವ್ಯಗಳು’ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ನಡೆದ ತಮ್ಮ “ಕರುಳು ಕಟ್ಟಿದ ಬರಹ ‘ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಕೆಲವರು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವುದರಿಂದ ನಿಮ್ಮ ಸೃಜನಶೀಲ ಸಾಹಿತ್ಯಕ್ಕೆ ಅಡ್ಡಿಯುಂಟಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಇಂತಹ ಬರವಣಿಗೆಯಿಂದ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಆತ್ಮ ಸಂತೋಷಕ್ಕೆ ನಾನು ಅಂಕಣ ಬರೆಯುತ್ತೇನೆ. ಅಂಕಣ ಬರಹದ ಮೂಲಕ ಹೆಚ್ಚು ವಿಚಾರಗಳನ್ನು ಜನರಿಗೆ ತಲುಪಿಸುತ್ತೇನೆ. ಅವು ಜನರಲ್ಲಿ ಚರ್ಚೆ ಹುಟ್ಟುಹಾಕುತ್ತವೆ ಎಂದರು.

ಅಂಕಣ ಬರಹವು ನನಗೆ ಬೃಹತ್‌ ಕಾವ್ಯವಿದ್ದಂತೆ. ಅಂಕಣಕ್ಕೆ ಒಂದು ಚೌಕಟ್ಟು ಇರುತ್ತದೆ. ಆ ಚೌಕಟ್ಟಿನ ಒಳಗೆ ಆತ್ಮವಂಚನೆ ಮಾಡಿಕೊಳ್ಳದೇ ಹೇಳಬೇಕಾದದ್ದನ್ನು ನೇರವಾಗಿ ಜನರ ಮುಂದೆ ಇಡಬೇಕಾಗಿದೆ. ಹೀಗಾಗಿ ಅಂಕಣ ಬರಹ ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ನಾನು ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಜಿ.ಎಸ್‌.ಶಿವರುದ್ರಪ್ಪ ಸೇರಿದಂತೆ ದೊಡ್ಡ ವಿದ್ವಾಂಸರಿದ್ದರು. ಸುಮಾರು ಏಳು ವರ್ಷಗಳ ಕಾಲ ಸ್ವಾಗತ ಭಾಷಣ ಮಾಡಲು ಕೂಡ ಅವಕಾಶ ಸಿಕ್ಕಿರಲಿಲ್ಲ. ಕನ್ನಡ ಅಧ್ಯಯನ ಕೇಂದ್ರವು ನನ್ನ ಸಾಹಿತ್ಯ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಯಿತು ಎಂದು ಹೇಳಿದರು.

ಸಾಹಿತಿಗಳು ಅಕ್ಷರ ಬೇಟೆಗಾರರಾಗಬಾರದು. ಅಂತಃಕರಣ ಮತ್ತು ಮನುಷ್ಯತ್ವ ಅವರ ಬರವಣಿಗೆಯಲ್ಲಿ ಅಡಕವಾಗಿರಬೇಕು. ಈ ಹಿಂದೆ ಸಾಹಿತಿಯೊಬ್ಬರು ಬರಗೂರರು ಸಾಹಿತಿಯೇ ಅಲ್ಲ ಎಂದು ಟೀಕಿಸಿದ್ದರು.ಆಗ ನನಗೆ ಬೇಸರವಾಗಲಿಲ್ಲ. ಆದರೆ ಮನುಷ್ಯತ್ವ ಇಲ್ಲ ಎಂದಿದ್ದರೆ ಬೇಸರವಾಗುತ್ತಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.

Advertisement

ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಮಾತನಾಡಿ, ಬರಗೂರರ ಬರಹ ತನ್ಮಯಗೊಳಿಸುತ್ತವೆ ಎಂದು ಹೇಳಿದರು. ಬರಗೂರರ “ಕರುಳು ಕಟ್ಟಿದ ಬರಹ’ ಕೃತಿ ಶೋಧನೆಯ ಭಾಗವಾಗಿ ಮೂಡಿ ಬಂದಿದೆ. ಅಂಕಣ ಸಾಹಿತ್ಯದ ಉತ್ತಮ ಲೇಖನಗಳಿಗೆ ಪುಸ್ತಕ ರೂಪ ನೀಡಲಾಗಿದೆ. ಇವರ ಅಂಕಣ ಬರಹ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ, ವಿ.ಗೋಪಾಲಗೌಡ ಮಾತನಾಡಿ, ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ದೊರಕಬೇಕು ಎಂದರು. ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ,ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next